ADVERTISEMENT

ಬಿಡಿಎ ಜಾಗದಲ್ಲೇ ಸ್ಕೈಡೆಕ್‌: ಡಿ.ಕೆ.ಶಿವಕುಮಾರ್‌

ಭೂಮಿ ನೀಡಲು ನೈಸ್‌ ತಕರಾರು: ಅವರಿಗೆ ಪಾಠ ಕಲಿಸುತ್ತೇವೆ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 20:25 IST
Last Updated 1 ಜನವರಿ 2026, 20:25 IST
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕಾಗಿ ಡಿ.ಕೆ. ಶಿವಕುಮಾರ್‌ ಅವರು ಸ್ಥಳ ಪರಿಶೀಲನೆ ನಡೆಸಿದರು. ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಉಪಸ್ಥಿತರಿದ್ದರು
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸ್ಕೈಡೆಕ್‌ ನಿರ್ಮಾಣಕ್ಕಾಗಿ ಡಿ.ಕೆ. ಶಿವಕುಮಾರ್‌ ಅವರು ಸ್ಥಳ ಪರಿಶೀಲನೆ ನಡೆಸಿದರು. ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಉಪಸ್ಥಿತರಿದ್ದರು   

ಬೆಂಗಳೂರು: ಬಿಡಿಎ ಜಾಗದಲ್ಲೇ ಸ್ಕೈಡೆಕ್‌ ನಿರ್ಮಾಣ ಮಾಡಲಾಗುತ್ತದೆ. ವಿಮಾನ ಹಾರಾಟಕ್ಕೆ ಗೋಪುರದ ಸಮಸ್ಯೆ ಇರದಂತೆ ಸ್ಥಳವನ್ನು ಗುರುತಿಸಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚಲ್ಲಘಟ್ಟ, ಭೀಮನಕುಪ್ಪೆಯಲ್ಲಿ ಬಿಡಿಎ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ ಸಮೀಪ ಸ್ಕೈಡೆಕ್ ನಿರ್ಮಾಣ ಸ್ಥಳ ಮತ್ತು ರಸ್ತೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ನೈಸ್ ಸಂಸ್ಥೆಗೆ ನೀಡಲಾಗಿದ್ದ ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ನೈಸ್‌ ಸಂಸ್ಥೆಯವರು ತಕರಾರು ಎತ್ತಿದ್ದಾರೆ. ಅವರು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಹೀಗಾಗಿ ಬೇರೆ ದಾರಿ ಹುಡುಕುತ್ತೇವೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ. ಹೀಗಾಗಿ ಸ್ಕೈಡೆಕ್‌ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಲೂಪ್‌ಗೆ ಚಾಲನೆ: ಹೆಬ್ಬಾಳ ಜಂಕ್ಷನ್‌ನಲ್ಲಿರುವ ಮೇಲ್ಸೇತುವೆಯಲ್ಲಿ ಹೊಸ ಲೂಪ್‌ಗೆ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕೆ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್‌ ಸಹಕಾರಿಯಾಗಲಿದೆ. ಈ ಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ’ ಎಂದು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದೂವರೇ ಕಿ.ಮೀ. ಸುರಂಗ ರಸ್ತೆ ಬರಲಿದೆ. ಮೇಖ್ರಿ ವೃತ್ತದ ಬಳಿಯತ್ತ ಮೇಲ್ಸೇತುವೆ ಸಾಗಲಿದೆ. ಇದನ್ನು ಮೂರು ಭಾಗವಾಗಿ ನಿರ್ಮಿಸಲಾಗುವುದು. ತುಮಕೂರು ರಸ್ತೆಯಿಂದ ಕೆ.ಆರ್ ಪುರದವರೆಗೆ ಮೇಲ್ಸೇತುವೆ ಮೂಲಕ ಹೊರ ವರ್ತುಲ ರಸ್ತೆ (ಒಆರ್ ಆರ್) ಮಾಡಲು ಮುಂದಾಗಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಬಿಡಿಎ ಈ ವರ್ಷ 50ನೇ ವಸಂತಕ್ಕೆ ಕಾಲಿಟ್ಟಿದ್ದು, ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. 120 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಅನ್ನು ಕಾರ್ಯರೂಪಕ್ಕೆ ತರಲು ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಶೇ 35ರಷ್ಟು ವಾಣಿಜ್ಯ ಭೂಮಿಯನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ. ಜತೆಗೆ, ಸಣ್ಣ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ’ ಎಂದರು.

ಚಲ್ಲಘಟ್ಟ–ಭೀಮನಕುಪ್ಪೆಯಲ್ಲಿ ಸ್ಕೈಡೆಕ್‌!

‘ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಚಲ್ಲಘಟ್ಟ ಹಾಗೂ ಭೀಮನಕುಪ್ಪೆ ಸರ್ವೆ ನಂಬರ್‌ಗಳಲ್ಲಿ ಸುಮಾರು 50 ಎಕರೆ ಜಾಗವಿದ್ದು ಅದರಲ್ಲಿ 25 ಎಕರೆ ಜಾಗವನ್ನು ಸ್ಕೈಡೆಕ್‌ ಹಾಗೂ ಇತರೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು. ‘ನೈಸ್‌ ರಸ್ತೆಗೆ ಹೊಂದಿಕೊಂಡಂತಿರುವ ರಾಮಸಂದ್ರದ ಸರ್ವೆ ನಂ. 39 40 41ರಲ್ಲಿ ಸ್ಕೈಡೆಕ್‌ ನಿರ್ಮಿಸಲು ಯೋಜಿಸಲಾಗಿತ್ತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನೀಡಿದ್ದ 8 ಎಕರೆ 33 ಗುಂಟೆಯನ್ನು ನೈಸ್‌ ಸಂಸ್ಥೆ ಉಪಯೋಗಿಸಿಕೊಂಡಿರಲಿಲ್ಲ. ಈ ಭೂಮಿ ಸೇರಿದಂತೆ ಒಟ್ಟು 33 ಎಕರೆ ಪ್ರದೇಶದಲ್ಲಿ ಸ್ಕೈಡೆಕ್‌ ಯೋಜನೆಗೆ ಬಳಸಿಕೊಳ್ಳಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ನೈಸ್‌ ಸಂಸ್ಥೆಯ ತಕರಾರಿನಿಂದಾಗಿ ಅಲ್ಲಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಬಿಡಿಎ ಜಾಗದಲ್ಲೇ ಸ್ಕೈಡೆಕ್‌ ಯೋಜನೆಗೆ ಭೂಮಿ ಉಪಯೋಗಿಸಿಕೊಳ್ಳಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿಯವರಿಂದ ಭೂಮಿಯನ್ನು ಹಸ್ತಾಂತರಿಸಿಕೊಳ್ಳುವುದು ಮಾತ್ರ ಬಾಕಿ ಉಳಿದಿದ್ದು ಈ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು. ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಬಿಡಿಎ ನಿರ್ಮಿಸುತ್ತಿರುವ ‘ಪ್ರಮುಖ ರಸ್ತೆ’ಗೂ (ಎಂಎಆರ್‌) ಈಗ ಸ್ಕೈಡೆಕ್‌ಗೆ ಗುರುತಿಸಲಾಗಿರುವ ಸ್ಥಳಕ್ಕೂ ಸಂಪರ್ಕವಿರಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.