
ನಗರದಲ್ಲಿ ಅಜೀಂ ಪೇಮ್‌ಜಿ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ‘ಎಸ್.ಎಲ್.ಭೈರಪ್ಪನವರ ಸಾಹಿತ್ಯಕ ಕೊಡುಗೆಗಳ ವಿವಿಧ ಮುಖಗಳು ಒಂದು ಅವಲೋಕನ’ದಲ್ಲಿ ಅಜಕ್ಕಳ ಗಿರೀಶ್ ಭಟ್ ಅವರು ಮಾತನಾಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಕುವೆಂಪು, ಶಿವರಾಮ ಕಾರಂತರಂತಹ ಕಾದಂಬರಿಕಾರರು ಉಳಿಸಿಕೊಂಡಿದ್ದ ಬರಹನಿಷ್ಠೆ, ವೈಶಿಷ್ಟ್ಯವನ್ನು ಎಸ್.ಎಲ್. ಭೈರಪ್ಪ ಉಳಿಸಿಕೊಳ್ಳಲಿಲ್ಲ. ಅವರು ಜನಪ್ರಿಯ ಕಾದಂಬರಿಕಾರರಾಗಿ ಬದಲಾದರು’ ಎಂದು ಸಾಹಿತಿ ಕೆ. ಸತ್ಯನಾರಾಯಣ ಹೇಳಿದರು.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತಿ ಸಂಭ್ರಮ ಬುಧವಾರ ಆಯೋಜಿಸಿದ್ದ ‘ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಕೊಡುಗೆಗಳ ವಿವಿಧ ಮುಖಗಳು–ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಕನ್ನಡ ಕಾದಂಬರಿ ಪರಂಪರೆ ಮತ್ತು ಭೈರಪ್ಪ ವಿಷಯದ ಕುರಿತು ಮಾತನಾಡಿದರು.
‘ಕನ್ನಡದಲ್ಲಿ ಭೈರಪ್ಪ ಬರೆಯುವ ಹೊತ್ತಿಗೆ ಕುವೆಂಪು ಹಾಗೂ ಶಿವರಾಮ ಕಾರಂತರು ಪ್ರವರ್ಧನಮಾನದಲ್ಲಿದ್ದರು. ಆಸ್ತಿಕರಾಗಿದ್ದ ಕುವೆಂಪು ಹಾಗೂ ನಾಸ್ತಿಕರಾಗಿದ್ದ ಕಾರಂತರು ಕಾದಂಬರಿ ನಿಷ್ಠೆಯನ್ನು ಎಂದೂ ಬಿಡಲಿಲ್ಲ. ಕುವೆಂಪು ‘ಕಾನೂನು ಹೆಗ್ಗಡಿತಿ’ ರಚಿಸಿದ ನಾಲ್ಕು ದಶಕಗಳ ಬಳಿಕ ‘ಮಲೆಗಳಲ್ಲಿ ಮದುಮಗಳು’ ಬರೆದರೂ ಕಾದಂಬರಿಯ ನಿಷ್ಠೆ ಕಡಿಮೆಯಾಗಿರಲಿಲ್ಲ. ಕಾರಂತರು 40ಕ್ಕೂ ಅಧಿಕ ಕಾದಂಬರಿ ರಚಿಸಿದರೂ ಕೊನೆಯವರೆಗೂ ವಿಶಿಷ್ಟತೆ ಬಿಟ್ಟುಕೊಡಲಿಲ್ಲ. ಭೈರಪ್ಪ ಅವರು ಭಿನ್ನ ವಿಷಯಗಳ ಆಯ್ಕೆ ಮೂಲಕ 25 ಕಾದಂಬರಿಗಳನ್ನು ರಚಿಸಿದರೂ ಮೊದಲು ಇದ್ದ ನಿಷ್ಠೆಯನ್ನು ಉಳಿಸಿಕೊಳ್ಳಲಿಲ್ಲ’ ಎಂದು ವಿಶ್ಲೇಷಿಸಿದರು.
‘ಕಾದಂಬರಿಕಾರರನ್ನು ಓದುಗರು ಹಾಗೂ ಸಂಸ್ಕೃತಿ ವಿದ್ಯಮಾನದಲ್ಲಿ ನೋಡಿದಾಗ ಭೈರಪ್ಪನವರು ಓದುಗ ಪರಂಪರೆಯನ್ನು ಸೃಷ್ಟಿಸಿದ ಲೇಖಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾರಂತರು ಬರವಣಿಗೆನಿಷ್ಠೆಯ ಮೂಲಕ ತಲೆಮಾರುಗಳ ಪರೀಕ್ಷೆಯಲ್ಲಿ ಯಶಸ್ವಿಯೂ ಆದರು. ಭೈರಪ್ಪ ಅವರ ಕುರಿತು ಈ ನೆಲೆಯಲ್ಲಿ ಚರ್ಚಿಸಲು ಇದು ಸೂಕ್ತವಾದ ಕಾಲವಲ್ಲ’ ಎಂದು ತಿಳಿಸಿದರು.
‘ಭೈರಪ್ಪನವರ ಕಾದಂಬರಿಗಳಲ್ಲಿ ಸಂಸ್ಕೃತಿ ವಿಮರ್ಶೆ’ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜಕ್ಕಳ ಗಿರೀಶ್ ಭಟ್, ‘ಭೈರಪ್ಪ ಅವರು ತತ್ವಶಾಸ್ತ್ರದ ಮೂಲಕ ಮನುಷ್ಯ ಸ್ವಭಾವದ ಅಂತರಂಗವನ್ನು ಶೋಧನೆ ಮಾಡುತ್ತಲೇ ಸಂಸ್ಕೃತಿ ವಿಮರ್ಶೆ ಮಾಡಿದವರು. ಹಲವಾರು ಕಾದಂಬರಿಗಳಲ್ಲಿ ಅದನ್ನು ಕಾಣಬಹುದು. ನವ್ಯ ಕಾಲದಲ್ಲಿ ಬರೆಯಲು ಆರಂಭಿಸಿ ಜಾತಿ, ಅಸ್ಪೃಶ್ಯತೆ, ಧರ್ಮ, ಮತಾಂತರದಂತಹ ಸೂಕ್ಷ್ಮ ವಿಚಾರಗಳ ಕೇಂದ್ರಿತವಾಗಿ ಬರವಣಿಗೆ ಮುಂದುವರಿಸಿದರು. ಭಿನ್ನ ಸಂಸ್ಕೃತಿಯನ್ನು ಕಾದಂಬರಿಗಳ ಮೂಲಕ ಶೋಧಿಸಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.