ADVERTISEMENT

ಸೃಜನಶೀಲ ಲೇಖಕನಿಗೆ ವಿದ್ವತ್ತಿನ ಭಾರ ಇರಬಾರದು: ಎಸ್‌.ಎಲ್. ಭೈರಪ್ಪ

ಎಸ್.ಆರ್.ರಾಮಸ್ವಾಮಿಗೆ ‘ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 0:30 IST
Last Updated 19 ಫೆಬ್ರುವರಿ 2024, 0:30 IST
<div class="paragraphs"><p>ಕಾರ್ಯಕ್ರಮದಲ್ಲಿ ಎಸ್.ಆರ್. ರಾಮಸ್ವಾಮಿ ಅವರಿಗೆ ‘ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. </p></div>

ಕಾರ್ಯಕ್ರಮದಲ್ಲಿ ಎಸ್.ಆರ್. ರಾಮಸ್ವಾಮಿ ಅವರಿಗೆ ‘ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸೃಜನಶೀಲ ಲೇಖಕನಿಗೆ ವಿದ್ವತ್ತಿನ ಭಾರ ಇರಬಾರದು. ಈ ಭಾರ ಯಾವಾಗ ಜಾಸ್ತಿ ಆಗುತ್ತದೆಯೋ ಆಗ ಸೃಜನಶೀಲತೆ ಕಳೆದುಕೊಳ್ಳುತ್ತದೆ’ ಎಂದು ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ತಿಳಿಸಿದರು. 

ADVERTISEMENT

ಎಸ್‌.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಆರ್. ರಾಮಸ್ವಾಮಿ ಅವರಿಗೆ ‘ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ.

ಈ ವೇಳೆ ಮಾತನಾಡಿದ ಅವರು, ‘ಲೇಖಕನಿಗೆ ವಿದ್ವತ್ತಿನ ಸಹಾಯ ಬೇಕಾಗುತ್ತದೆ. ಆದರೆ, ಅದು ಭಾರ ಆಗಬಾರದು. ಲೇಖಕರ ಸೃಜನಶೀಲತೆಯನ್ನು ಗುರುತಿಸುವುದೂ ಮುಖ್ಯವಾಗುತ್ತದೆ. ಕರ್ನಾಟಕದಲ್ಲಿ ವಿಮರ್ಶೆ ಎನ್ನುವುದನ್ನು ಉಸಿರು ಕಟ್ಟುವ ರೀತಿ ಕೈಯಲ್ಲಿ ಹಿಡಿದುಕೊಂಡವರು ನನ್ನನ್ನು ದೂರ ಮಾಡಿದ್ದರು. ಈಗ ಅವರ ಸಂಖ್ಯೆ ಕಡಿಮೆ ಆಗಿದೆ’ ಎಂದು ಹೇಳಿದರು.  

‘ನಮ್ಮ ಸೃಜನಶೀಲ ಲೇಖಕರು ರಾಮಸ್ವಾಮಿ ಅವರ ಬಳಿ ಹೋದರೆ ತುಂಬಾ ಲಾಭ ಪಡೆಯಬಹದು. ಈ ಲಾಭವನ್ನು ನಾನು ಪಡೆದಿದ್ದು, ಮುಂದೆಯೂ ಪಡೆಯುತ್ತೇನೆ. ಅವರಿಗೆ ಪ್ರಶಸ್ತಿ ನೀಡಿರುವುದು ಪ್ರತಿಷ್ಠಾನಕ್ಕೇ ಗೌರವ ನೀಡಿದಂತಾಗಿದೆ’ ಎಂದರು. 

ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರಿ, ‘ಈ ಪ್ರಶಸ್ತಿಗೆ ರಾಮಸ್ವಾಮಿ ಅವರಿಗಿಂತ ಹಿರಿಯರು ಮತ್ತು ಅರ್ಹರು ಸಿಗುವುದು ಕಷ್ಟ. ರಾಮಸ್ವಾಮಿ ಅವರು ಗೋಖಲೆ ಸಂಸ್ಥೆಯ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಭಾರತೀಯ ಸಂಸ್ಕೃತಿ, ಇತಿಹಾಸ, ಸಾಹಿತ್ಯ ಅಧ್ಯಯನಗಳಿಗೆ ಸಂಸ್ಥೆ ಹೆಚ್ಚು ತೊಡಗಿಸಿಕೊಂಡಿತು. ಡಿ.ವಿ.ಜಿ ಅವರು ಕಟ್ಟಿದ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಹಿರಿಯರ ಹಾದಿಯಲ್ಲಿಯೇ ಸಾಗಿ, ಅಕ್ಷಯಗೊಳಿಸಿದ್ದಾರೆ. ರಾಮಸ್ವಾಮಿ ಅವರು ತೆರೆದ ಪುಸ್ತಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಶಸ್ತಿ ಪುರಸ್ಕೃತ ರಾಮಸ್ವಾಮಿ, ‘ನನ್ನ ಗುರು ಪಂಕ್ತಿಯ ಯಾರಿಗೂ ಇಂತಹ ವೈಭವದ ಆಚರಣೆ ನಡೆಯಲಿಲ್ಲ. ಭೈರಪ್ಪ ಅವರು ದಶಕಗಳಿಂದ ನನ್ನ ಬೆನ್ನು ತಟ್ಟುತ್ತಾ ಬಂದಿದ್ದಾರೆ. ನಾನು ಮೊದಲ ಹೆಜ್ಜೆಗಳನ್ನು ಇಡುತ್ತಿರುವಾಗ ಹಲವು ಮಾದರಿ ವ್ಯಕ್ತಿಗಳು ಇರುತ್ತಿದ್ದರು. ಈಗ ಬೆರಳಣಿಕೆಯಷ್ಟು ಮಂದಿ ಮಾತ್ರ ಆ ರೀತಿಯ ವ್ಯಕ್ತಿಗಳಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.