ಬೆಂಗಳೂರು: ನಿಧಾನಗತಿಯ ಸಂಚಾರ ಹೊಂದಿರುವ ನಗರಗಳ ಪಟ್ಟಿಯಲ್ಲಿ ವಿಶ್ವದಲ್ಲೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ನೆದರ್ಲೆಂಡ್‌ನ ಲೋಕೇಷನ್ ಟೆಕ್ನಾಲಜಿಯ ಟಾಮ್ ಟಾಮ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರಿಗೆ ಈ ಸ್ಥಾನ ಸಿಕ್ಕಿದೆ.
ನಗರದ ಹಲವು ಪ್ರದೇಶಗಳಲ್ಲಿ ಸದಾ ಗಿಜಿಗುಡುವ ವಾಹನ ದಟ್ಟಣೆಯಿಂದ ಜನರು ಹೈರಾಣಾಗುತ್ತಿದ್ದಾರೆ. ಅದರಲ್ಲೂ ಕೇಂದ್ರ ಭಾಗದಲ್ಲಿ ವಾಹನಗಳ ಸಂಚಾರ ಆಮೆಗತಿಯಲ್ಲಿ ಸಾಗುವುದು ಸಾಮಾನ್ಯವಾಗಿದೆ. ಬೆಂಗಳೂರು ನಗರದ ಒಳಗೆ 10 ಕಿ.ಮೀ ದೂರ ಕ್ರಮಿಸಲು 34 ನಿಮಿಷ 10 ಸೆಕೆಂಡ್ ಬೇಕೆಂದು ಟಾಮ್ ಟಾಮ್ ಸಂಸ್ಥೆ ವರದಿ ಮಾಡಿದೆ.
ವಿಶ್ವದ ಪ್ರಮುಖ ಮಹಾನಗರಗಳಲ್ಲಿನ ಸಂಚಾರ ದಟ್ಟಣೆ ಸಂಬಂಧ ವೈಜ್ಞಾನಿಕ ಅಧ್ಯಯನ ನಡೆಸಿರುವ ಟಾಮ್ ಟಾಮ್ ಸಂಸ್ಥೆ ತನ್ನ ವರದಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಕುರಿತು ಹಲವು ಅಂಶಗಳನ್ನು ಉಲ್ಲೇಖಿಸಿದೆ. ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆ ವಿಶ್ವಮಟ್ಟದಲ್ಲಿ ಅನಾವರಣವಾಗಿದೆ.
ನಗರದ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನು ಸಂಚಾರ ದಟ್ಟಣೆಯಲ್ಲೇ ಕಳೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಂತೆಯೇ ಕೋಲ್ಕತ್ತ ಹಾಗೂ ಪುಣೆ ನಗರಗಳಲ್ಲೂ ಹೆಚ್ಚು ವಾಹನ ದಟ್ಟಣೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಿಶ್ವದಲ್ಲಿಯೇ ಅತಿಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ನಗರಗಳ ಪೈಕಿ ಬೆಂಗಳೂರು 2022ರಲ್ಲಿ ಎರಡನೇ ಸ್ಥಾನದಲ್ಲಿತ್ತು. ಆಗ ಪ್ರತಿ ಕಿ.ಮೀ ಪ್ರಯಾಣಕ್ಕೆ 29 ನಿಮಿಷ 10 ಸೆಕೆಂಡ್ ಬೇಕೆಂದು ವರದಿ ಹೇಳಿತ್ತು.
ದಟ್ಟಣೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಬಿಜೆಪಿ
ಟಾಮ್ ಸಂಸ್ಥೆಯ ವರದಿ ಬಹಿರಂಗವಾದ ಮೇಲೆ ರಾಜಧಾನಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಟೀಕಿಸಿದೆ. ‘ಬೆಂಗಳೂರು ಅಂದರೆ ಉದ್ಯಾನ ನಗರಿ ಎನ್ನುವ ಘನತೆ ಇತ್ತು. ಈಗ ವಾಹನ ದಟ್ಟಣೆಗೆ ಸಿಲುಕಿ ನರಳುವ ನಗರವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಟೀಕಿಸಿದ್ದಾರೆ. ‘ಬ್ರ್ಯಾಂಡ್ ಬ್ರ್ಯಾಂಡ್ ಎನ್ನುತ್ತಲೇ ರಾಜಧಾನಿಯನ್ನ ಬ್ಯಾಡ್ ಮಾಡಿದ್ದು ಈ ಸರ್ಕಾರದ ಸಾಧನೆ’ ಎಂದೂ ಬಿಜೆಪಿ ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.