ADVERTISEMENT

ಫಲಾನುಭವಿಗಳಿಂದ ಹೆಚ್ಚುವರಿ ಹಣ ಸಂಗ್ರಹ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 3:08 IST
Last Updated 25 ಮಾರ್ಚ್ 2021, 3:08 IST

ಬೆಂಗಳೂರು: ‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಹಾಗೂ ನಿರ್ದಿಷ್ಟ ಇಲಾಖೆಯಿಂದ ₹5.50 ಲಕ್ಷದವರೆಗೆ ನೀಡಲಾಗುತ್ತದೆ. ಆದರೆ, ಫಲಾನುಭವಿಗಳಿಂದ ಹೆಚ್ಚುವರಿಯಾಗಿ ₹3 ಲಕ್ಷ ತೆಗೆದುಕೊಳ್ಳಲಾಗುತ್ತಿದೆ’ ಎಂದು ಸ್ಲಂ ಜನರ ಸಂಘಟನೆ ಆರೋಪಿಸಿದೆ.

‘ಪಿಎಂಎವೈ ಅಡಿ ವಸತಿಗಾಗಿ ಕೇಂದ್ರ ಸರ್ಕಾರ ₹1.5 ಲಕ್ಷ ನೀಡಿದರೆ, ಎಸ್‌ಸಿ, ಎಸ್‌ಟಿಯವರಿಗೆ ರಾಜ್ಯ ಸರ್ಕಾರ ₹2 ಲಕ್ಷ ನೀಡುತ್ತದೆ. ಸಮಾಜ ಕಲ್ಯಾಣ ಇಲಾಖೆ ಅಥವಾ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ₹1 ಲಕ್ಷ ಹಾಗೂ ಫಲಾನುಭವಿಗಳಿಂದ ₹75 ಸಾವಿರ ತೆಗೆದುಕೊಳ್ಳಲಾಗುತ್ತದೆ. ಉಪಗುತ್ತಿಗೆ ಪಡೆದವರು ವ್ಯತ್ಯಾಸದ ಮೊತ್ತ (ವೇರಿಯೇಷನ್ ಅಮೌಂಟ್‌) ಎಂದು ಮತ್ತೆ ₹3 ಲಕ್ಷ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಇಸಾಕ್ ಅಮೃತ್‌ ರಾಜ್ ದೂರಿದ್ದಾರೆ.

‘ಈ ಯೋಜನೆಯಡಿ ಇ–ಟೆಂಡರ್ ಆದ ನಂತರ ಗುತ್ತಿಗೆದಾರರು ಉಪಗುತ್ತಿಗೆ ಕೊಡುತ್ತಾರೆ. ಹೀಗೆ ಉಪಗುತ್ತಿಗೆ ಪಡೆದವರು ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವುದೇ ಲೆಕ್ಕಪತ್ರ ಇರುವುದಿಲ್ಲ. ಸರ್ಕಾರ ಹೀಗೆ ಟೆಂಡರ್ ನೀಡಿ, ಗುತ್ತಿಗೆ ಮೂಲಕ ಮನೆ ಕಟ್ಟಿಸಿಕೊಡುವ ಬದಲು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕಿದರೆ ಅವರು ತಮಗೆ ಬೇಕಾದಂತೆ ಕಟ್ಟಿಕೊಳ್ಳುತ್ತಾರೆ. ಸರ್ಕಾರಕ್ಕೂ ಹಣ ಉಳಿದಂತಾಗುತ್ತದೆ’ ಎಂದೂ ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.