ADVERTISEMENT

ಮಲ್ಲೇಶ್ವರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕಲಿಕೆ: ಡಾ.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 25 ಮೇ 2020, 10:43 IST
Last Updated 25 ಮೇ 2020, 10:43 IST
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಸಮಾಲೋಚನೆ ನಡೆಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೋಮವಾರ ಸಮಾಲೋಚನೆ ನಡೆಸಿದರು.   

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಇ-ಲರ್ನಿಂಗ್ ವ್ಯವಸ್ಥೆ ಸಾಧ್ಯವಾಗಿಸುವ ಜತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವ ವ್ಯವಸ್ಥೆ ಜಾರಿ‌ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಸೋಮವಾರ ಸಮಾಲೋಚನೆ ನಡೆಸಿದ ನಂತರ ಅವರು ಮಾತನಾಡಿದರು.

"ಮಲ್ಲೇಶ್ವರದ 11 ಕ್ಯಾಂಪಸ್‌ಗಳಲ್ಲಿರುವ ಒಟ್ಟು 22 ಸರ್ಕಾರಿ ಶಾಲೆಗಳಲ್ಲಿ ಬೋಧನಾ ವಿಧಾನದಲ್ಲಿ ಬದಲಾವಣೆ ತರುವ ಮೂಲಕ ಮಕ್ಕಳ ಕಲಿಕೆಯನ್ನು ಸುಧಾರಿಸುವ ಸಂಬಂಧ ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಲಾಯಿತು. ಸರ್ಕಾರಿ ಶಾಲೆಗಳ ಕಲಿಕಾ ಗುಣಮಟ್ಟ‌ ಯಾವುದೇ ಖಾಸಗಿ ಶಾಲೆಯ ಕಲಿಕೆಯ ಗುಣಮಟ್ಟಕ್ಕಿಂತ ಕಡಿಮೆ ಇರಬಾರದು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುವುದು. ಈ ಮೂಲಕ ಮಕ್ಕಳನ್ನು ಆಕರ್ಷಿಸಿ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಯನ್ನು ಹೆಚ್ಚಿಸುವುದು ನಮ್ಮ ಉದ್ದೇಶ," ಎಂದು ತಿಳಿಸಿದರು.

ADVERTISEMENT

ಸ್ಮಾರ್ಟ್‌ಬೋರ್ಡ್‌ ಪಾಠ

"ಈಗಿರುವ ಪಠ್ಯಕ್ರಮವನ್ನೇ ಮಕ್ಕಳಿಗೆ ಸುಲಭವಾಗಿ ಮತ್ತು ಅರ್ಥವಾಗುವ ರೀತಿ ಕಲಿಸುವ ವಿಧಾನಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸಲು ಸಾಧ್ಯ. ಶಿಕ್ಷಣ ಫೌಂಡೇಶನ್‌ ಸಹಯೋಗದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಪ್ರತಿ ಶಾಲೆಯಲ್ಲೂ ಒಂದು ಆಡಿಯೋ ವಿಷನ್‌ ಕೊಠಡಿ ನಿಗದಿಪಡಿಸಿ ಸ್ಮಾರ್ಟ್‌ ಬೋರ್ಡ್‌ ಮೂಲಕ ವಿಜ್ಞಾನ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪಾಠ ಮಾಡಲಾಗುವುದು. ಜತೆಗೆ ಮೊದಲ‌ ಹಂತದಲ್ಲಿ ಶಾಲೆಯ ಪ್ರತಿ 5 ಮಕ್ಕಳಿಗೆ ಒಂದೊಂದು ಲ್ಯಾಪ್‌ಟಾಪ್‌ ನೀಡುವ ಬಗ್ಗೆಯೂ ಚರ್ಚೆ ನಡೆಯಿತು" ಎಂದು ತಿಳಿಸಿದರು.

ಡ್ಯಾಶ್‌ಬೋರ್ಡ್‌ ಬಳಕೆ

"ಹೊಸ ಬೋಧನಾ ವಿಧಾನದ ಮೂಲಕ ಮಕ್ಕಳ ಕಲಿಕೆ ಯಾವ ಹಂತದಲ್ಲಿದೆ? ಎಷ್ಟು ಶಾಲೆಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿದೆ? ಕಲಿಕೆಯಲ್ಲಿ ಸಾಧಿಸಿರುವ ಯಶಸ್ಸಿನ ಬಗ್ಗೆ ಡ್ಯಾಶ್‌ಬೋರ್ಡ್‌ ವ್ಯವಸ್ಥೆ ಇರಲಿದ್ದು, ಪ್ರತಿದಿನವೂ ಮಾಹಿತಿ ಅಪ್‌ಡೇಟ್‌ ಮಾಡಲಾಗುವುದು. ಆ್ಯಪ್‌ ಮೂಲಕ ಅದನ್ನು ಖುದ್ದು ಪರಿಶೀಲಿಸುವುದಾಗಿ" ಹೇಳಿದರು.

"ಹೊಸ ಬೋಧನಾ ವಿಧಾನದಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗುವುದು. ಪಠ್ಯ ವಿಷಯವಲ್ಲದೇ, ಸಾಮಾಜಿಕ ವಿಷಯಗಳ ಕಲಿಕೆಗೂ ಆದ್ಯತೆ ನೀಡಲಾಗುವುದು ಎಂದ ಅವರು, ಸದ್ಯದ ಕೋವಿಡ್‌ ಸಂದರ್ಭದಲ್ಲಿ ಸ್ವಚ್ಛತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ 3 ತಿಂಗಳ ಕಾಲ ಕೈಯನ್ನು ಸರಿಯಾಗಿ ತೊಳೆಯುವ ಅಭ್ಯಾಸ ಮಾಡಿಸಿದರೆ, ಅದು ಅವರಿಗೆ ರೂಢಿಯಾಗುವುದು. ಇದಕ್ಕಾಗಿಯೇ ಪ್ರತ್ಯೇಕ ಲಾಗ್‌ಬುಕ್‌ ನಿರ್ವಹಣೆ ಮಾಡಿ, ಎಷ್ಟು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದೂ ತಿಳಿದುಕೊಳ್ಳಲಾಗುತ್ತದೆ," ಎಂದರು.

ಪಠ್ಯೇತರ ಚಟುವಟಿಕೆ

"ಪ್ರತಿ ಮಗುವಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಲ್ಲಿ ಸಂವಹನ, ಸೃಜನಶೀಲತೆ, ತರ್ಕಬದ್ಧ ಚಿಂತನೆಗಳನ್ನು ಬೆಳೆಸುವ ಜತೆಗೆ ಸಂಗೀತ, ಕ್ರೀಡೆ ಮುಂತಾದ ಹವ್ಯಾಸಗಳಿಗೆ ಪೂರಕ ತರಬೇತಿ ಒದಗಿಸಲಾಗುವುದು. ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಸ್ವಯಂ ಸೇವಕರು ಪಾಠ ಹೇಳಿಕೊಡುತ್ತಾರೆ. ಕ್ರೀಡಾಸಕ್ತರಿಗಾಗಿ ಪ್ರತಿ ಶನಿವಾರ ಕೋಚ್‌ ಮೂಲಕ ತರಬೇತಿ ವ್ಯವಸ್ಥೆ ಮಾಡಲಾಗುತ್ತದೆ" ಎಂದು ಹೇಳಿದರು.

ಆಂಗ್ಲ ಮಾಧ್ಯಮ

"ಮಲ್ಲೇಶ್ವರದ 6 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಇದ್ದು, ಇನ್ನೂ 2-3 ಕಡೆ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ., ಅದಕ್ಕೆ ಅಗತ್ಯ ಅನುಮತಿ ಪಡೆಯಲಾಗುವುದು,"ಎಂದು ತಿಳಿಸಿದರು.

ಸಭೆಯಲ್ಲಿ ಶಿಕ್ಷಣ ಫೌಂಡೇಶನ್‌ನ ಸಿಇಓ ಪ್ರಸನ್ನ, ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.