ADVERTISEMENT

KR ಮಾರುಕಟ್ಟೆ | ಪಾರ್ಕಿಂಗ್: ಅತ್ಯಾಧುನಿಕ ತಂತ್ರಜ್ಞಾನ ಬಳಕೆ; ಮಹೇಶ್ವರ್ ರಾವ್‌

ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:17 IST
Last Updated 17 ಫೆಬ್ರುವರಿ 2026, 16:17 IST
ಮಹೇಶ್ವರ್ ರಾವ್
ಮಹೇಶ್ವರ್ ರಾವ್   

ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ ‘ಅತ್ಯಾಧುನಿಕ ಪಾರ್ಕಿಂಗ್ ತಂತ್ರಜ್ಞಾನ’ ವ್ಯವಸ್ಥೆ ಜಾರಿಗೊಳಿಸುತ್ತಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆಗೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆ.ಆರ್. ಮಾರುಕಟ್ಟೆಯ ತಳಮಹಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲು ಸೂಚಿಸಿದರು.

ADVERTISEMENT

‘ಕೆ.ಆರ್. ಮಾರುಕಟ್ಟೆ ಮುಂಭಾಗ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ ಅವರು, ಮೊದಲನೇ ಮಹಡಿಯಲ್ಲಿರುವ ಶೌಚಾಲಯ ಬಳಕೆಯಲ್ಲಿ ಇಲ್ಲದಿರುವುದನ್ನು ಗಮನಿಸಿ, ದುರಸ್ತಿ ಕಾರ್ಯ ಕೈಗೊಂಡು ನಾಗರಿಕರು ಬಳಸುವಂತೆ ಮಾಡಬೇಕು’ ಎಂದರು.

ತಳಮಹಡಿಯಲ್ಲಿ ಮಳೆನೀರು ನಿಲ್ಲುವುದನ್ನು ತಪ್ಪಿಸಲು ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ, ಅಗ್ನಿಶಾಮಕ ಸುರಕ್ಷತಾ ಕ್ರಮಗಳು ಸೇರಿದಂತೆ ಇತರೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರೈಟ್ ಪಾರ್ಕಿಂಗ್ ಸಂಸ್ಥೆ ವತಿಯಿಂದ ತಳಮಹಡಿಯಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಲ್ಲಿ 400 ದ್ವಿಚಕ್ರ ವಾಹನಗಳು ಹಾಗೂ 200 ಕಾರುಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.  67 ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಎಷ್ಟು ವಾಹನಗಳು ಪ್ರವೇಶಿಸುತ್ತವೆ ಹಾಗೂ ನಿರ್ಗಮಿಸುತ್ತವೆ ಎಂಬ ಸಂಪೂರ್ಣ ಮಾಹಿತಿ ದಾಖಲೆಯಾಗಲಿದೆ. ಇದಲ್ಲದೆ, ಸುರಕ್ಷತಾ ದೃಷ್ಟಿಯಿಂದ 12 ಅಲಾರಂ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.