ADVERTISEMENT

ಸಮಾಜಮುಖಿ ಸಾಹಿತ್ಯ ಸಮ್ಮೇಳನ: ಏಕ ಭಾಷೆ–ಸಂಸ್ಕೃತಿ ಹೇರಿಕೆಗೆ ಒಕ್ಕೊರಲ ವಿರೋಧ

ಬಹುಸಂಸ್ಕೃತಿಯ ನಾಶಕ್ಕೆ ಕೇಂದ್ರ ಸರ್ಕಾರದ ಹುನ್ನಾರ: ಸಾಹಿತಿಗಳ ಕಳವಳ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 16:17 IST
Last Updated 8 ನವೆಂಬರ್ 2025, 16:17 IST
<div class="paragraphs"><p>ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜಮುಖಿ ಬಳಗದ ಜಯರಾಮ್ ರಾಯಪುರ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಎಚ್.ಎಸ್. ಶಿವಪ್ರಕಾಶ್ ಪಾಲ್ಗೊಂಡಿದ್ದರು </p></div>

ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜಮುಖಿ ಬಳಗದ ಜಯರಾಮ್ ರಾಯಪುರ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಹಂಪ ನಾಗರಾಜಯ್ಯ, ಎಚ್.ಎಸ್. ಶಿವಪ್ರಕಾಶ್ ಪಾಲ್ಗೊಂಡಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರ ಸರ್ಕಾರವು ದೇಶದಾದ್ಯಂತ ಏಕ ಭಾಷೆ, ಏಕ ಸಂಸ್ಕೃತಿ, ಏಕ ಚುನಾವಣೆ ಹೇರಿ, ಬಹುಮುಖಿ ಸಮಾಜವನ್ನು ಇಲ್ಲವಾಗಿಸುವ ಹುನ್ನಾರ ನಡೆಸುತ್ತಿದೆ’ ಎಂಬ ಕಳವಳ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದಲ್ಲಿ ವ್ಯಕ್ತವಾಯಿತು. ಸಮಾಜಮುಖಿ ಬಳಗವು ಆಯೋಜಿಸಿರುವ ಈ ನುಡಿಹಬ್ಬದ ಉದ್ಘಾಟನಾ ವೇದಿಕೆ ಹಂಚಿಕೊಂಡಿದ್ದ ಸಾಹಿತಿಗಳು, ‘ಈ ಹುನ್ನಾರದ ವಿರುದ್ಧ ದನಿಯೆತ್ತದೆ ಬೇರೆ ದಾರಿಯಿಲ್ಲ’ ಎಂಬ ಮಾತುಗಳನ್ನಾಡಿದರು.

ADVERTISEMENT

‘ಭಸ್ಮಾಸುರನ ಪ್ರಶ್ನಿಸದಿದ್ದರೆ ಪ್ರಜಾತಂತ್ರ ಇತಿಹಾಸಕ್ಕೆ’: ಹಂಪ ನಾಗರಾಜಯ್ಯ

ಒಂದು ದೇಶ ಒಂದು ಭಾಷೆ ಒಂದು ಸಂಸ್ಕೃತಿ ಒಂದು ಚುನಾವಣೆ ಎಂಬ ಆಕರ್ಷಕ ಘೋಷವಾಕ್ಯಗಳನ್ನು 12 ವರ್ಷಗಳಿಂದ ಕೇಳುತ್ತಿದ್ದೇವೆ. ಈ ಘೋಷವಾಕ್ಯಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ಇದೊಂದು ಭಯಂಕರ ಭಸ್ಮಾಸುರನಾಗಿದ್ದು ಈ ಘೋಷಣೆ ತಂದೊಡ್ಡಬಹುದಾದ ಅಪಾಯವನ್ನು ಪ್ರಶ್ನಿಸುವ ಕಾಲ ಬಂದಿದೆ. ಈಗಲೂ ತಡಮಾಡಿದರೆ ಪ್ರಜಾಪ್ರಭುತ್ವ ಗತ ಇತಿಹಾಸ ಆಗಲಿದೆ. ಜನಭಾಷೆಗಳನ್ನು ಹತ್ತಿಕ್ಕಿ ಸಂಸ್ಕೃತವನ್ನು ಅರಳಿಸುವ ಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಸಂಸ್ಕೃತ ಹಿಂದಿ ನಮ್ಮ ಶತ್ರುಗಳಲ್ಲ. ಎರಡು ಶ್ರೀಮಂತ ಪ್ರಾಕೃತ ಭಾಷೆಗಳೇ. ಅವುಗಳನ್ನು ನಮ್ಮ ಮೇಲೇ ಬಲವಂತವಾಗಿ ಹೇರುವ ಅಗತ್ಯವಿಲ್ಲ. ಇದೊಂದು ಬಗೆಯ ದ್ರಾವಿಡ ಭಾಷೆಗಳ ಮೇಲೆ ಸೇಡು ತೀರಿಸಿಕೊಳ್ಳುವ ಯತ್ನ. ಕೆಲವೇ ಮಂದಿ ವ್ಯವಹಾರಕ್ಕೆ ಬಳಸುವ ಸಂಸ್ಕೃತದ ಅಭಿವೃದ್ಧಿಗೆ ಎಂದು ಕೇಂದ್ರ ಸರ್ಕಾರವು ₹2532 ಕೋಟಿ ಅನುದಾನ ನೀಡಿದೆ. ಕೋಟಿ–ಕೋಟಿ ಜನರು ಮಾತನಾಡುವ ಕನ್ನಡಕ್ಕೆ ₹12.28 ಕೋಟಿ ತಮಿಳಿಗೆ ₹13.1 ಕೋಟಿ ತೆಲುಗಿಗೆ ₹12.65 ಕೋಟಿ ಮಲಯಾಳಕ್ಕೆ ₹4.52 ಕೋಟಿ ನೀಡಿದೆ.  ಈ ಹುನ್ನಾರದ ವಿರುದ್ಧ ನಾವೆಲ್ಲರೂ ದನಿಯೆತ್ತಬೇಕಾದ ಅದನ್ನು ಪ್ರಶ್ನಿಸಬೇಕಾದ ಒತ್ತಡ ಈಗ ನಿರ್ಮಾಣವಾಗಿದೆ. ಆ ಕೆಲಸವನ್ನು ಮಾಡದೇ ಇದ್ದರೆ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ.

‘ಪ್ರತಿಗಾಮಿ ಪರಿಭಾಷೆ’: ಬರಗೂರು ರಾಮಚಂದ್ರಪ್ಪ

ಪ್ರಗತಿಪರ ಪರಿಭಾಷೆಗಳನ್ನು ಈಗ ಪ್ರತಿಗಾಮಿ ನೆಲೆಯಲ್ಲಿ ಬಳಸಲಾಗುತ್ತಿದೆ. ನೀವು ಏಕತೆ ಎಂದು ಹೇಳಿದರೆ ಅದನ್ನು ಯಾರೂ ರಾಷ್ಟ್ರೀಯ ಏಕತೆ ಎಂದು ಪರಿಗಣಿಸುವುದಿಲ್ಲ. ಬದಲಿಗೆ ‘ಧಾರ್ಮಿಕ ಏಕತೆ’ ಎಂದು ಪ್ರತಿಪಾದಿಸಲಾಗುತ್ತದೆ. ಸಮಾಜಮುಖಿ ಎಂಬುದನ್ನು ಧಾರ್ಮಿಕ ಸಮಾಜಮುಖಿ– ಜಾತೀಯ ಸಮಾಜಮುಖಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂತಹದ್ದೊಂದು ಅಪಾಯಕಾರಿ ಸ್ಥಿತಿಗೆ ಬಂದು ನಿಂತಿದ್ದೇವೆ. ಇಡೀ ಸಮಾಜದಲ್ಲಿ ವಿಷಮಕಾರಿ ವಾತಾವರಣ ನಿರ್ಮಾಣವಾಗಿದೆ. ಸಂವಾದದ ಜಾಗವನ್ನು ಉನ್ಮಾದ ವಿವೇಕವನ್ನು ಅವಿವೇಕ ಮಾನವೀಯತೆಯನ್ನು ಮತೀಯತೆ ಸತ್ಯವನ್ನು ಅಸತ್ಯ ಅತಿಕ್ರಮಿಸುತ್ತಿವೆ. ಏಕ ಭಾಷೆ ಏಕ ಸಂಸ್ಕೃತಿಯ ಹೆಸರಿನಲ್ಲಿ ಈ ಅತಿಕ್ರಮಗಳು ನಡೆಯುತ್ತಿವೆ. ಕನ್ನಡ ಸಾಹಿತ್ಯವು ನಾಯಕ–ಪ್ರತಿನಾಯಕ ಪರಂಪರೆಯನ್ನು ಪೋಷಿಸುತ್ತಾ ಬಂದಿದೆ. ಆದರೆ ಈಚೆಗೆ ನಾಯಕ–ಖಳನಾಯಕ ಪರಿಕಲ್ಪನೆಗಳು ಸಾಹಿತ್ಯಕ್ಕೆ ಇಳಿಯುತ್ತಿವೆ. ಸಾಹಿತ್ಯ ಕ್ಷೇತ್ರಕ್ಕೂ ಕಾರ್ಪೊರೇಟ್‌ ಬಹುರಾಷ್ಟ್ರೀಯ ಸಂಸ್ಕೃತಿ ಪ್ರವೇಶಿಸಿದೆ. ಜೈಪುರ ಲಿಟರೇಚರ್‌ ಫೆಸ್ಟಿವಲ್‌ ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ ಇವಕ್ಕೆ ಸ್ಪಷ್ಟ ನಿದರ್ಶನಗಳು. ಸಮಾಜಮುಖಿ ಸಾಹಿತಿಗಳು ಇಂತಹ ಫೆಸ್ಟಿವಲ್‌ಗಳಿಂದ ದೂರ ಉಳಿಯಬೇಕಾಗಿದೆ.

‘ಅನೇಕ’ದ ಕತ್ತುಹಿಸುಕುತ್ತಿರುವ ‘ಏಕ’: ಎಚ್‌.ಎಸ್‌.ಶಿವಪ್ರಕಾಶ್‌

ಭಾರತದ ಸಂದರ್ಭದಲ್ಲಿ ‘ಏಕ’ ಎಂಬುದು ಬಹಳ ಹಿಂದಿನಿಂದಲೂ ಇದೆ. ಆದರೆ ಆ ‘ಏಕ’ ಎಂಬುದು ಯಾವತ್ತಿಗೂ ‘ಅನೇಕ’ದ ವಿರುದ್ಧ ಇರಲಿಲ್ಲ. ಆದರೆ ಈಗ ‘ಏಕ’ವನ್ನು ‘ಅನೇಕ’ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ‘ಅನೇಕ’ದ ಕತ್ತುಹಿಸುಕಲಾಗುತ್ತಿದೆ. ಇದು ಈ ಹೊತ್ತಿನ ಅಪಾಯ. ಈ ಎಲ್ಲವನ್ನೂ ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಕಾರ್ಪೊರೇಟ್‌ ಸಾಹಿತ್ಯ ಫೆಸ್ಟಿವಲ್‌ಗಳು ಈ ಹುನ್ನಾರದ ಇನ್ನೊಂದು ಮುಖ. ನಾನು ಇನ್ನೆಂದಿಗೂ ಅಂತಹ ಫೆಸ್ಟಿವಲ್‌ಗಳಲ್ಲಿ ಭಾಗಿಯಾಗುವುದಿಲ್ಲ. ವಚನಕಾರರ ವಿಚಾರದಲ್ಲೂ ಏಕ ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಕೆಲಸ ಕನ್ನಡ ಸಾಹಿತ್ಯ ಲೋಕದಲ್ಲಾಗಿದೆ. ಬಸವಣ್ಣ ಅಕ್ಕಮಹಾದೇವಿ ಅಲ್ಲಮ ಪ್ರಭುವನ್ನಷ್ಟೇ ವಚನ ಸಂಸ್ಕೃತಿಯ ರೂವಾರಿಗಳು ಎಂದು ತೋರಿಸಲಾಗಿದೆ. ಇತರ ವಚನಕಾರರ ಸಂಸ್ಕೃತಿಯನ್ನು ಈ ಮೂಲಕ ಹತ್ತಿಕ್ಕಲಾಗಿದೆ. ಇದು ಮಹಾ ತಪ್ಪು. ಏಕ ಭಾಷೆ ಏಕ ಸಂಸ್ಕೃತಿ ಹೆಸರಿನಲ್ಲಿ ದಕ್ಷಿಣದ ಮತ್ತು ದ್ರಾವಿಡ ಭಾಷಾ ಸಂಸ್ಕೃತಿಗಳ ಮೇಲಷ್ಟೇ ದಾಳಿಯಾಗುತ್ತಿಲ್ಲ. ಬಹಳ ಹಿಂದೆಯೇ ಉತ್ತರ ಭಾರತದ ಪ್ರಾದೇಶಿಕ ಭಾಷೆಗಳನ್ನು ಹಿಂದಿ ಹತ್ತಿಕ್ಕಿದೆ. ಉತ್ತರಾಖಂಡದ ಭಾಷೆಗಳು ಇಲ್ಲವಾಗಿವೆ. ಬಿಹಾರದ ಮೈಥಿಲಿಯನ್ನು ಬಳಸುವವರೇ ಇಲ್ಲ. ಅವಧ್‌ ಭೋಜಪುರಿ ಭಾಷೆಗಳ ಸ್ಥಿತಿಯೂ ಇದೇ ರೀತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.