ಸೌರ ವಿದ್ಯುತ್ ಸ್ಥಾವರ
ಬೆಂಗಳೂರು: ರಾಜ್ಯದಲ್ಲಿ 19 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆ ಅನುಷ್ಠಾನಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಜೊತೆಗೆ, ಸಂಯೋಜಿತ ವಿಧಾನದ ಮೂಲಕ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸಂಗ್ರಹಿಸುವ ಬ್ಯಾಟರಿಗಳ ಮತ್ತು ಪ್ರಸರಣ ಮಾರ್ಗಗಳ ಸ್ಥಾಪಿಸುವ ಯೋಜನೆಯನ್ನೂ ರೂಪಿಸಲಾಗಿದೆ.
ಈ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಇಂಧನ ಇಲಾಖೆ ಸಿದ್ಧತೆ ನಡೆಸಿದೆ. 2030ರ ವೇಳೆಗೆ ಗುರಿ ಸಾಧಿಸುವ ಯೋಜನೆ ಇದೆ.
‘ಈ ಯೋಜನೆ ಸೌರ ಮತ್ತು ಪವನ ವಿದ್ಯುತ್ ಎರಡನ್ನೂ ಒಟ್ಟಾಗಿ ಬಳಸಿಕೊಳ್ಳುವುದನ್ನು ಕೇಂದ್ರೀಕರಿಸುತ್ತದೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಸಂಗ್ರಹಿಸಲು ಬ್ಯಾಟರಿ ವ್ಯವಸ್ಥೆ ಅಥವಾ ಪ್ರಸರಣದ ಮಾರ್ಗ ಮಧ್ಯೆ ಸಂಗ್ರಹಿಸಿಟ್ಟುಕೊಂಡು ಅಗತ್ಯವಿದ್ದಾಗ ಬಳಕೆ ಮಾಡಬಹುದಾದ (ಪಂಪ್ಡ್ ಸ್ಟೋರೇಜ್) ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು’ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ ತಿಳಿಸಿದರು.
‘ಬೆಳಿಗ್ಗೆ ವೇಳೆ ಸೌರಶಕ್ತಿ ಉತ್ಪಾದನೆ ಹೆಚ್ಚಿರುತ್ತದೆ. ಸಂಜೆ ವೇಳೆ ಪವನ ಶಕ್ತಿ ಉತ್ಪಾದನೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ, ನಾವು ಹೈಬ್ರಿಡ್ ಮಾದರಿಯನ್ನು ಅನುಸರಿಸಿಕೊಂಡು, ಸಾಮಾನ್ಯ ಪ್ರಸರಣ ಮಾರ್ಗಗಳನ್ನು ಬಳಸಲು ಆಯ್ಕೆ ಮಾಡಿಕೊಂಡಿದ್ದೇವೆ. ಇದನ್ನು ಸಂಗ್ರಹ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ’ ಎಂದು ಅವರು ವಿವರಿಸಿದರು.
ವಿದ್ಯುತ್ ಸಂಗ್ರಹ ವ್ಯವಸ್ಥೆಯ ಕೊರತೆಯಿಂದಾಗಿ, ರಾಜ್ಯದಲ್ಲಿ ಕೆಲವೊಮ್ಮೆ ಬೇಡಿಕೆ (ಪೀಕ್) ಅವಧಿಯಲ್ಲಿ ವಿದ್ಯುತ್ ಕೊರತೆ ಎದುರಾಗುತ್ತದೆ. ಹಾಗೆಯೇ, ದಟ್ಟಣೆ ಇಲ್ಲದ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಹೊಸ ನವೀಕರಿಸಬಹುದಾದ ವಿದ್ಯುತ್ ಯೋಜನೆಯಿಂದ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಸುಧಾರಿಸುವುದಲ್ಲದೆ, ಹೆಚ್ಚು ಉತ್ಪಾದನೆಯಾಗುವ ವಿದ್ಯುತ್ ಸಂಗ್ರಹಿಸಿ ದಟ್ಟಣೆ ಅವಧಿಯಲ್ಲಿ ಬಳಸಲು ಸಹಾಯವಾಗುತ್ತದೆ.
ಈ ಯೋಜನೆಯ ಗುರಿ 19 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ. ಈ ಯೋಜನೆಯನ್ನು ಬೆಳಗಾವಿ, ಕೊಪ್ಪಳ, ರಾಯಚೂರು, ಗದಗ ಮತ್ತು ಹಾವೇರಿಯಂತಹ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತು ಮಧ್ಯ ಕರ್ನಾಟಕದ ಜಿಲ್ಲೆ ಚಿತ್ರದುರ್ಗದಲ್ಲಿ ಅನುಷ್ಠಾನಗೊಳಿಸಿ 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಪ್ರಸ್ತಾವವಿದೆ.
ಯೋಜನೆ ಅನುಷ್ಠಾನಕ್ಕೆ ಹಲವು ಜಿಲ್ಲೆಗಳಲ್ಲಿ ಜಮೀನುಗಳನ್ನು ಗುರುತಿಸಲಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ರೈತರೊಂದಿಗೆ ಮಾತುಕತೆ ಪೂರ್ಣಗೊಂಡಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಂಕಜ್‌ಕುಮಾರ್ ಪಾಂಡೆ ತಿಳಿಸಿದರು.
ಈ ಯೋಜನೆ ಕುರಿತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ(ಕೆಆರ್‌ಇಡಿಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರನ್ನು ಕೇಳಿದಾಗ, ‘ಸಾಮಾನ್ಯವಾಗಿ ಇಂಥ ಯೋಜನೆಗಳ ಅನುಷ್ಠಾನಕ್ಕೆ ದೀರ್ಘ ಸಮಯ ಬೇಕಾಗುತ್ತದೆ. ಯೋಜನೆಗಳನ್ನು ರೂಪಿಸಿ, ಅದಕ್ಕೆ ಹಲವು ಕಡೆಗಳಿಂದ ಅನುಮತಿ ಪಡೆಯಬೇಕು. ಇಂಥ ಪ್ರಕ್ರಿಯೆಗಳು ಹೆಚ್ಚು ಸಮಯ ಕೇಳುತ್ತವೆ. ಇವುಗಳ ನಡುವೆಯೂ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕವು ದೇಶದ ಮುಂಚೂಣಿ ಐದು ರಾಜ್ಯಗಳಲ್ಲಿ ಒಂದಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.