ADVERTISEMENT

ಬೆಂಗಳೂರು: ಕಸ ವಿಲೇವಾರಿ: ಬಳಕೆದಾರರ ಶುಲ್ಕ ಸಂಗ್ರಹ ಪ್ರಸ್ತಾಪವಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 20:35 IST
Last Updated 23 ಜೂನ್ 2021, 20:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗಾಗಿಯೇ ರಚನೆಯಾಗಿರುವ‘ಬೆಂಗಳೂರು ಕಸ ನಿರ್ವಹಣೆ ನಿಯಮಿತ’ ಕಂಪನಿ ಜುಲೈ 1 ರಿಂದ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದ್ದು, ಕಸ ನಿರ್ವಹಣೆಗೆ ಪ್ರತ್ಯೇಕವಾಗಿ ಬಳಕೆದಾರರ ಶುಲ್ಕ ಸಂಗ್ರಹಿಸುವ ಪ್ರಸ್ತಾವ ಮತ್ತೆ ಚರ್ಚೆಯಾಗುತ್ತಿದೆ. ಆದರೆ, ‘ಇಂತಹ ಯಾವುದೇ ಪ್ರಸ್ತಾಪ ಕಂಪನಿಯ ಮುಂದಿಲ್ಲ’ ಎಂದು ಕಂಪನಿಯ ಹಂಗಾಮಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗೌರವ್‌ ಗುಪ್ತ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಜನರು ಈಗ ಕ್ಲಿಷ್ಟಕರ ಸನ್ನಿವೇಶ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಸ ನಿರ್ವಹಣೆಗಾಗಿ ಬಳಕೆದಾರರ ಶುಲ್ಕ ಸಂಗ್ರಹಿಸುವ ಸಾಧ್ಯತೆ ಇಲ್ಲ’ ಎಂದರು.

‘ಕಂಪನಿಗೆ ಪೂರ್ಣಪ್ರಮಾಣದ ಸಿಇಒ ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಅಭ್ಯರ್ಥಿಯ ಆಯ್ಕೆಗಾಗಿ ಪರಿಶೋಧನಾ ಸಮಿತಿಯನ್ನೂ ರಚಿಸಲಾಗಿದೆ. ಕಂಪನಿಯ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಬಿಬಿಎಂಪಿಯಿಂದ ನಿಯೋಜನೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಟ್ಟಿಯೂ ಸಿದ್ಧವಾಗಿದೆ. ಕಾಂಪ್ಯಾಕ್ಟರ್‌, ಆಟೊಟಿಪ್ಪರ್‌ ಸೇರಿದಂತೆ ಕಸ ನಿರ್ವಹಣೆಯ ಪರಿಕರಗಳನ್ನು ಬಿಬಿಎಂಪಿಯಿಂದ ಹಸ್ತಾಂತರಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಂಪನಿಗೆ ಸಿಇಒ ನೇಮಕಗೊಂಡ ಬಳಿಕ, ಅವರ ನೇತೃತ್ವದ ತಂಡವು ಕಸ ವಿಲೇವಾರಿ ವ್ಯವಸ್ಥೆಯಲ್ಲಿ ತರಬಹುದಾದ ಸುಧಾರಣೆಗಳ ಬಗ್ಗೆ ಪ್ರಸ್ತಾವಗಳನ್ನು ಸಿದ್ಧಪಡಿಸಲಿದೆ. ಕಂಪನಿಯ ಆಡಳಿತ ಮಂಡಳಿಯ ಒಪ್ಪಿಗೆ ಸಿಕ್ಕಿದ ಬಳಿಕ ಆ ಪ್ರಸ್ತಾವಗಳನ್ನು ಜಾರಿಗೊಳಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಕಂಪನಿಯು ವಸಂತನಗರದ ತಿಮ್ಮಯ್ಯ ರಸ್ತೆ ಪಕ್ಕದಲ್ಲಿರುವ ಬಿಬಿಎಂಪಿ ಕಟ್ಟಡದ ಎರಡನೇ ಮಹಡಿಯಲ್ಲಿ ಶೀಘ್ರವೇ ತನ್ನ ಕಚೇರಿಯನ್ನು ಆರಂಭಿಸಲಿದೆ.

2019ರ ಜು.30ರಂದು ಪಾಲಿಕೆ ಸಭೆಯಲ್ಲಿ ಅಂಗೀಕಾರಗೊಂಡಬಿಬಿಎಂಪಿಯ ಪೌರ ಕಸ ನಿರ್ವಹಣೆ ಉಪನಿಯಮಗಳ ಅಧಿಸೂಚನೆಯು ರಾಜ್ಯಪತ್ರದಲ್ಲಿ 2020ರ ಜೂನ್ 4ರಂದು ಪ್ರಕಟವಾಗಿದೆ. ನಿತ್ಯ 100 ಕೆ.ಜಿಗಿಂತ ಕಡಿಮೆ ಕಸ ಉತ್ಪಾದಿಸುವ ಮನೆಗಳು /ಕಟ್ಟಡ ಸಮುಚ್ಚಯಗಳು ಮತ್ತು 100 ಕೆ.ಜಿ.ಗಿಂತ ಕಡಿಮೆ ಕಸ ಉತ್ಪಾದಿಸುವ ಹಾಗೂ 5000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ವಾಣಿಜ್ಯ ಮತ್ತು ಇತರೆ ಕಟ್ಟಡಗಳಿಗೆ ಇದರ ನಿಯಮ 15 ಇ ಮತ್ತು ಜೆಡ್‌ ಎಫ್‌ ಪ್ರಕಾರ ಬಳಕೆದಾರರ ಶುಲ್ಕ ನಿಗದಿ ಮಾಡಲಾಗಿದೆ.

ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕವನ್ನು ವಿದ್ಯುತ್‌ ಬಿಲ್‌ ಜೊತೆಗೆ ಸಂಗ್ರಹಿಸುವ ಪ್ರಸ್ತಾವವನ್ನು ಬಿಬಿಎಂಪಿ 2020ರ ಡಿಸೆಂಬರ್‌ನಲ್ಲಿ ಸಿದ್ಧಪಡಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಪ್ರಸ್ತಾವ ಜಾರಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.