ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಲೇವಾರಿಯಾಗದೇ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಏಳು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿಗಳಾದ ರಮೇಶ್ ಕೆ.ಎನ್., ಎಚ್.ಎನ್. ಗೋಪಾಲಕೃಷ್ಣ, ಮುಲ್ಲೈ ಮುಗಿಲನ್ ಎಂ.ಪಿ., ಅರುಂಧತಿ ಚಂದ್ರಶೇಖರ್, ಸೆಲ್ವಮಣಿ, ಹೊನ್ನಾಂಬ ಹಾಗೂ ವಿದ್ಯಾಕುಮಾರಿ ಅವರನ್ನು ವಿಶೇಷ ಜಿಲ್ಲಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈಗಾಗಲೇ ವಿಶೇಷ ಜಿಲ್ಲಾಧಿಕಾರಿಗಳಾಗಿರುವ ಎಸ್.ಎನ್. ಬಾಲಚಂದ್ರ ಹಾಗೂ ಅರ್ಚನಾ ಮುಂದುವರಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
‘ಮೇ 2023ರಲ್ಲಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 7,460 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 1 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಬಾಕಿ ಇದ್ದ 6393 ಪ್ರಕರಣಗಳಿದ್ದವು. ಅದರಲ್ಲಿ 5 ವರ್ಷಕ್ಕೂ ಮೇಲ್ಪಟ್ಟ 4,894 ಪ್ರಕರಣಗಳಿದ್ದವು. ಎರಡು ವರ್ಷಗಳಲ್ಲಿ 3,729 ಬಾಕಿ ಇದ್ದ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದೇ ಅವಧಿಯಲ್ಲಿ 1,545 ಹೊಸ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ 5276 ಪ್ರಕರಣಗಳು ಬಾಕಿ ಇವೆ’ ಎಂದು ವಿವರ ನೀಡಿದ್ದಾರೆ.
ಪ್ರತಿ ತಿಂಗಳು ಸರಾಸರಿ 143 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಈ ಪ್ರಮಾಣದಲ್ಲಿ ಇತ್ಯರ್ಥ ಮಾಡುತ್ತಾ ಹೋದರೆ ವಿಲೇವಾರಿ ಮಾಡಲು ಹಲವು ವರ್ಷಗಳೇ ಬೇಕಾಗುತ್ತದೆ. ಅದಕ್ಕಾಗಿ ವಿಶೇಷ ಜಿಲ್ಲಾಧಿಕಾರಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪ್ರತಿಯೊಬ್ಬರಿಗೂ 500ರಿಂದ 700 ಪ್ರಕರಣಗಳನ್ನು ನಿಗದಿಗೊಳಿಸಲಾಗಿದೆ. 6 ತಿಂಗಳ ಒಳಗೆ ಎಲ್ಲ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.