ರೈಲು
– ಪ್ರಜಾವಾಣಿ ಚಿತ್ರ
ಬೆಂಗಳೂರು: ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಒಂದು ಟ್ರಿಪ್’ಗೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲಿದೆ.
ಸೆ. 30 ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಿಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅ.1ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ರೈಲು, ಅದೇ ದಿನ ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
ಹೊಸಪೇಟೆಗೆ ವಿಶೇಷ ರೈಲು: ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಹೊಸಪೇಟೆ ನಡುವೆ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.
ಸೆ.26 ಮತ್ತು 28ರಂದು ರಾತ್ರಿ 7ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ರೈಲು ಹೊರಡಲಿದ್ದು, ಮರುದಿನ ಬೆಳಿಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಸೆ.27 ಮತ್ತು 29ರಂದು ರಾತ್ರಿ 8.45ಕ್ಕೆ ಹೊಸಪೇಟೆಯಿಂದ ಹೊರಟು ಮರುದಿನ ಬೆಳಿಗ್ಗೆ 8.10ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಹೊಂದಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.