ADVERTISEMENT

ಶ್ರೀನಿಧಿ ಸೌಹಾರ್ದ ಬ್ಯಾಂಕ್‌: ₹ 26 ಕೋಟಿ ಷೇರು ಬಂಡವಾಳ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 21:07 IST
Last Updated 4 ಫೆಬ್ರುವರಿ 2026, 21:07 IST
   

ಬೆಂಗಳೂರು: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ 11 ಸಾವಿರ ಸದಸ್ಯರನ್ನು ಹೊಂದಿದ್ದು, ₹26 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಸಾಂಬ ಸದಾಶಿವರೆಡ್ಡಿ, ಉಪಾಧ್ಯಕ್ಷ ಸಿ.ಚೆನ್ನಾರೆಡ್ಡಿ ತಿಳಿಸಿದರು.

ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ‘ಜನವರಿ ಅಂತ್ಯಕ್ಕೆ ಠೇವಣಿ ₹478 ಕೋಟಿಯಷ್ಟಿದೆ. ₹336 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕಿನ ಒಟ್ಟು ಹೂಡಿಕೆ ₹ 204 ಕೋಟಿಯಿದ್ದು, ಇದರಲ್ಲಿ ಶೇ 68ರಷ್ಟನ್ನು ಸರ್ಕಾರಿ ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕ್‌ ₹ 814 ಕೋಟಿ ವ್ಯವಹಾರ ಹೊಂದಿದೆ. 2024-25ನೇ ಸಾಲಿನಲ್ಲಿ ₹8.07 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ವಿವರಿಸಿದರು. 

2025ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ ಶೇ 1.25ರಷ್ಟಿದೆ. ಎಲ್ಲ ರೀತಿಯ ಡಿಜಿಟಲ್ ಪೇಮೆಂಟ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆರ್‌ಟಿಜಿಎಸ್‌/ನೆಫ್ಟ್‌, ಎಟಿಎಂ ಕಾರ್ಡ್, ಲಾಕರ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ (2026-2031) ಎಲ್ಲ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಸಾಂಬ ಸದಾಶಿವರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಸಿ.ಚೆನ್ನಾರೆಡ್ಡಿ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ವಿ.ವಿ.ಪುರ, ಬೊಮ್ಮನಹಳ್ಳಿ, ಮಾರತ್‌ಹಳ್ಳಿ, ರಘುವನಹಳ್ಳಿ, ಅರೆಕೆರೆ, ಮರಸೂರು, ಹೆಸರಘಟ್ಟ ಮತ್ತು ಅಮೃತಹಳ್ಳಿಯಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ನೂತನ ಶಾಖೆಯನ್ನು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ಸದಸ್ಯರಾದ ಆರ್.ಪಿ.ಎಸ್.ರೆಡ್ಡಿ, ನಿರ್ದೇಶಕರಾದ ಪಿ.ಎನ್. ನಂಜಾರೆಡ್ಡಿ, ಎಂ.ವೆಂಕಟಸ್ವಾಮಿ,  ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.