ADVERTISEMENT

‘ಪ್ರಶ್ನೆಪತ್ರಿಕೆ ಹೊತ್ತ ವಾಹನ ದಾರಿ ಬದಲಿಸುವಂತಿಲ್ಲ’

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 17:42 IST
Last Updated 14 ಫೆಬ್ರುವರಿ 2020, 17:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವಾಹನಗಳು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ನಿಗದಿಪಡಿಸಿದ ಮಾರ್ಗದಲ್ಲೇ ಸಂಚರಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್‌ ಹೇಳಿದರು.

ಶುಕ್ರವಾರ ಇಲ್ಲಿ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠರು, ಖಜಾನಾಧಿಕಾರಿಗಳು ಮತ್ತು ಪಿಯು ಉಪನಿರ್ದೇಶಕರೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ‘ಪ್ರಶ್ನೆಪತ್ರಿಕೆ ರವಾನೆ ವಾಹನಗಳನ್ನು ರಾಜ್ಯದ ಯಾವುದೇ ವಾಹನ ತಪಾಸಣಾ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲೂ ತಪಾಸಣೆ ಮಾಡದಂತೆ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಆಯಾ ಜಿಲ್ಲೆಗಳಲ್ಲೂ ಇಂತಹ ಸೂಚನೆ ನೀಡಬೇಕು’ ಎಂದರು.

‘ಯಾವುದೋ ಪ್ರಶ್ನೆ ಪತ್ರಿಕೆಯನ್ನು ಈ ವರ್ಷದ್ದೆಂದು ನಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಗೊಂದಲ ಮೂಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ ಅವರು, ‘ಪರೀಕ್ಷಾ ಕೇಂದ್ರದೊಳಗೆ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಯಾರಿಗೂ ಪ್ರವೇಶಕ್ಕೆಅವಕಾಶವಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಝೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆಗಳು ಮುಗಿಯುವವರಗೆ ಮುಚ್ಚಿಸಬೇಕು’ ಎಂದರು.

ADVERTISEMENT

ಪದವಿಪೂರ್ವ ಇಲಾಖೆ ನಿರ್ದೇಶಕಿ ಎಂ.ಕನಗವಲ್ಲಿ, ಖಜಾನೆ ಇಲಾಖೆ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.