ADVERTISEMENT

SSLC Result: ಶ್ರಮಿಕರ ಮಕ್ಕಳ ಸಾಧನಾ ಸಂಭ್ರಮ

ಬಡಗಿಯೊಬ್ಬರ ಮಗನಿಗೂ, ಪಾನ್‌ ಶಾಪ್‌ ಇಟ್ಟುಕೊಂಡ ದಂಪತಿಯ ಮಗಳಿಗೂ 625 ಅಂಕ

ಬಾಲಕೃಷ್ಣ ಪಿ.ಎಚ್‌
Published 2 ಮೇ 2025, 23:45 IST
Last Updated 2 ಮೇ 2025, 23:45 IST
ಹೆತ್ತವರೊಂದಿಗೆ ಧನಲಕ್ಷ್ಮೀ ಎಂ.
ಹೆತ್ತವರೊಂದಿಗೆ ಧನಲಕ್ಷ್ಮೀ ಎಂ.   

ಬೆಂಗಳೂರು: ಪುಟ್ಟ ಪಾನ್‌ ಶಾಪ್‌ ಇಟ್ಟುಕೊಂಡು ದುಡಿಯುವ ದಂಪತಿಯ ಮಗಳು, ಬಡಗಿಯೊಬ್ಬರ ಮಗ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸಂಕನಹಳ್ಳಿಯ ಎಸ್‌.ಆರ್‌. ಮೋಹನ್‌– ವೀಣಾ ಬಿ. ದಂಪತಿ 20 ವರ್ಷಗಳ ಹಿಂದೆ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಬ್ಯಾಡರಹಳ್ಳಿಯಲ್ಲಿ ಪಾನ್‌ ಶಾಪ್‌ ಇಟ್ಟುಕೊಂಡು ದುಡಿಯುತ್ತಿದ್ದಾರೆ. ಅವರ ಒಬ್ಬಳೇ ಮಗಳು ಧನಲಕ್ಷ್ಮೀ ಎಂ. 625 ಅಂಕ ಗಳಿಸಿದವಳು. 

ಮಾಗಡಿ ಮುಖ್ಯರಸ್ತೆಯ ಕೆಂಪೇಗೌಡ ನಗರದ ಸೇಂಟ್‌ ಯಶ್‌ ಪಬ್ಲಿಕ್‌ ಹೈಸ್ಕೂಲ್‌ನಲ್ಲಿ ಓದುತ್ತಿರುವ ಧನಲಕ್ಷ್ಮೀ ‘ಪ್ರಜಾವಾಣಿ’ಜೊತೆಗೆ ಸಂತಸ ಹಂಚಿಕೊಂಡಳು. ‘ನಾನು ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಅಪ್ಪ ಅಮ್ಮನ ಬೆಂಬಲ, ಶಿಕ್ಷಕರ ಪ್ರೋತ್ಸಾಹ, ಶಾಲೆಯಲ್ಲಿದ್ದ ಉತ್ತಮ ವಾತಾವರಣದಿಂದ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು. ಚಾರ್ಟರ್ಡ್‌ ಅಕೌಂಟೆಂಟ್‌ ಆಗಬೇಕು. ಉತ್ತಮ ಉದ್ಯೋಗ ಹಿಡಿದು ಸ್ವಂತ ಮನೆ ಕಟ್ಟಬೇಕು’ ಎಂದು ಕನಸು ಹಂಚಿಕೊಂಡಳು.

ADVERTISEMENT

ತುಮಕೂರು ಜಿಲ್ಲೆ ಮಧುಗಿರಿಯ ಶ್ರೀನಿವಾಸರಾಜು–ರಾಜಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳು. ಅವರಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದಕ್ಕಾಗಿಯೇ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಶ್ರೀನಿವಾಸರಾಜು ಅವರು ಮರದ ಕೆತ್ತನೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಬಾಡಿಗೆ ಮನೆಯಲ್ಲಿದ್ದುಕೊಂಡು ಮಕ್ಕಳಿಬ್ಬರನ್ನು ಓದಿಸುತ್ತಿದ್ದಾರೆ. ಮೊದಲ ಮಗ ನವೀನ್‌ರಾಜು ಎಂಜಿನಿಯರಿಂಗ್‌ ಓದುತ್ತಿದ್ದು, ಎರಡನೇ ಮಗ ಮಧುಸೂದನ್‌ ರಾಜು ಎಸ್‌. ಮಲ್ಲೇಶ್ವರ 10ನೇ ಮುಖ್ಯರಸ್ತೆಯಲ್ಲಿರುವ ಕಿಶೋರ ಕೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿ.ಈ ಬಾರಿ ಎಸ್ಎಸ್‌ಎಲ್‌ಸಿಯಲ್ಲಿ 625 ಅಂಕ ಗಳಿಸಿದ್ದಾನೆ.

‘ಪರೀಕ್ಷೆಗಿಂತ ನಾಲ್ಕು ತಿಂಗಳ ಹಿಂದೆಯೇ ವೇಳಾಪಟ್ಟಿ ತಯಾರಿಸಿಕೊಂಡು ಅದರಂತೆ ನಿತ್ಯ ಓದುತ್ತಿದ್ದೆ. ಮುಂದೆ ಏನು ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಂಡು ಸಿಎ, ಎಂಬಿಎ ಮಾಡುವುದು ಇಲ್ಲವೇ ವಿಜ್ಞಾನ ಆಯ್ಕೆ ಮಾಡಿಕೊಂಡು ಎಂಜಿನಿಯರಿಂಗ್ ಮಾಡುವುದು ಸದ್ಯ ಮನಸ್ಸಿನಲ್ಲಿದೆ’ ಎಂದು ಮಧುಸೂದನ್‌ ರಾಜು ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಹೆತ್ತವರೊಂದಿಗೆ ಮಧುಸೂದನ್‌ ರಾಜು ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.