ADVERTISEMENT

ಸೇಂಟ್‌ ಜಾನ್ಸ್‌ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 21:49 IST
Last Updated 11 ಮಾರ್ಚ್ 2021, 21:49 IST
ಘಟಿಕೋತ್ಸವವನ್ನು ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ರೆವರೆಂಡ್ ಆರ್ಚ್ ಬಿಷಪ್ ಡಾ.ಜಾರ್ಜ್, ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಇದ್ದರು
ಘಟಿಕೋತ್ಸವವನ್ನು ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ರೆವರೆಂಡ್ ಆರ್ಚ್ ಬಿಷಪ್ ಡಾ.ಜಾರ್ಜ್, ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಇದ್ದರು   

ಬೆಂಗಳೂರು: ವೈದ್ಯಕೀಯ ಕ್ಷೇತ್ರಕ್ಕೆ ಬಂದ ಮೇಲೆ ನೈತಿಕತೆ ರೂಢಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ವೈದ್ಯರಿಗೆ ಕಿವಿಮಾತು ಹೇಳಿದರು.

ಕೋರಮಂಗಲದ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಈ ಕ್ಷೇತ್ರಕ್ಕೆ ಬಂದ ಮೇಲೆ ಲಾಭದ ಬಗ್ಗೆ ಯೋಚನೆ ಮಾಡಬಾರದು. ಸೇವೆಯ ಬಗ್ಗೆ ಚಿಂತಿಸಬೇಕು’ ಎಂದು ತಿಳಿಸಿದರು.

‘ಕೊರೊನಾ ಬಿಕ್ಕಟ್ಟು ಬಂದ ಮೇಲೆ ವೈದ್ಯರಿಗೆ ಸಾಕಷ್ಟು ಸವಾಲುಗಳು ಇವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು. ನಾನೂ ಒಬ್ಬ ವೈದ್ಯನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಹಣ ಮಾಡಲು ಅನೇಕ ಕ್ಷೇತ್ರಗಳಿವೆ’ ಎಂದರು.

ADVERTISEMENT

ಗ್ರಾಮಗಳಿಗೆ ಹೋಗಿ: ‘ವೈದ್ಯರಾದ ಮೇಲೆ ಕೇವಲ ನಗರಕ್ಕೆ ಸೀಮಿತವಾದರೆ ಉಪಯೋಗವಿಲ್ಲ. ಮುಖ್ಯವಾಗಿ ಹಳ್ಳಿ ಜನರಿಗೆ ನಿಮ್ಮ ಸೇವೆ ಸಿಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೇವೆ ಸಿಗಬೇಕು. ಇದನ್ನು ಗಮನದಲ್ಲಿ ಇಟ್ಟುಕೊಂಡು ಸೇಂಟ್ ಜಾನ್ಸ್ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ. ಇದು ಅನುಕರಣೀಯವಾದ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣದಲ್ಲಿ ಸುಧಾರಣೆ: ‘ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸುಧಾರಣೆಗಳನ್ನು ತರಲಾತ್ತಿದೆ. ಉತ್ತಮ ಕಲಿಕೆ ಮತ್ತು ಉತ್ತಮ ಬೋಧನೆ ಗುರಿಗಳನ್ನು ಇಟ್ಟುಕೊಂಡು ಹೆಜ್ಜೆ ಇಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದೇ ವರ್ಷ ಜಾರಿ ಆಗುತ್ತಿದೆ. ಹೀಗಾಗಿ, ಬಹು ವಿಷಯಗಳ ಆಯ್ಕೆ ಹಾಗೂ ಸಂಶೋಧನೆಗೆ ಹೆಚ್ಚು ಒತ್ತು ಕೊಡುವ ಕೆಲಸ ಮುಂದಿನ ದಿನಗಳಲ್ಲಿ ಅಗಲಿದೆ’ ಎಂದರು.

ಎಂಬಿಬಿಎಸ್, ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉಪಮುಖ್ಯಮಂತ್ರಿ ಅವರು ಪದವಿ ಪ್ರದಾನ ಮಾಡಿದರು. ಅತ್ಯುತ್ತಮ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿಗೂ ಸನ್ಮಾನ‌ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರೆವರೆಂಡ್ ಆರ್ಚ್ ಬಿಷಪ್ ಡಾ.ಜಾರ್ಜ್, ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ಡಾ. ಪಾಲ್, ಸಂಸ್ಥೆಯ ಡೀನ್ ಡಾ. ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.