ADVERTISEMENT

ರೈತ ಉಪಕಾರಿ ಕಾಯ್ದೆ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 23:07 IST
Last Updated 23 ಸೆಪ್ಟೆಂಬರ್ 2020, 23:07 IST
ಎಸ್.ಟಿ. ಸೋಮಶೇಖರ್
ಎಸ್.ಟಿ. ಸೋಮಶೇಖರ್   

ಬೆಂಗಳೂರು: ‘ಎಪಿಎಂಸಿ ಕಾಯ್ದೆ ರೈತರಿಗೆ ಉಪಕಾರಿಯಾಗಿದೆ. ಎಪಿಎಂಸಿಗಳು, ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಯಾರಿಗೆ ಬೇಕಾದರೂ ನೇರವಾಗಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

‘ರಾಜ್ಯದಲ್ಲಿ 162 ಎಪಿಎಂಸಿಗಳು ಇವೆ. ಯಾವುದೇ ಕಾರಣಕ್ಕೂ ಈ ಸಮಿತಿಗಳನ್ನು ಮುಚ್ಚುವುದಿಲ್ಲ. ಅವುಗಳ ಅಧಿಕಾರವನ್ನೂ ಮೊಟಕುಗೊಳಿಸುವುದಿಲ್ಲ. ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮೊದಲು ಎಪಿಎಂಸಿ ಸೆಸ್‌ ಅನ್ನು ₹1 ಮಾಡಿದ್ದೆವು. ಈ ದರ ಹೆಚ್ಚಾಯಿತು ಎಂಬ ದೂರುಗಳು ಬಂದಿದ್ದರಿಂದ ಸಂಪುಟದಲ್ಲಿ ಚರ್ಚೆ
ನಡೆಸಿ, 35 ಪೈಸೆಗೆ ನಿಗದಿ ಮಾಡಿದ್ದೇವೆ. ಇದರಿಂದ ಎಪಿಎಂಸಿಗಳಿಗೆ ವರ್ಷಕ್ಕೆ ₹120 ಕೋಟಿ ಆದಾಯ ಬರುತ್ತದೆ. ಇದರಿಂದ ಇವುಗಳ ಕಾರ್ಯನಿರ್ವಹಣೆ ಅಥವಾ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ’ ಎಂದು ವಿವರಿಸಿದರು.

ADVERTISEMENT

‘ಈ ಕಾಯ್ದೆ ತರುವುದಕ್ಕೆ ಮುನ್ನ 50ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿಗೆ ಉತ್ಪನ್ನ ಮಾರಾಟ ಮಾಡುವುದಕ್ಕೆ ಈ ಹಿಂದಿನ ಸರ್ಕಾರವೇ ಅನುಮತಿ ಕೊಟ್ಟಿತ್ತು. ಇದರಿಂದ ರೈತರಿಗೆ ಯಾವುದೇ ಸಮಸ್ಯೆ ಆಗಿಲ್ಲ.ಈಗಿನ ನೂತನ ಕಾಯ್ದೆಯಿಂದ, ಖರೀದಿದಾರರ ನಡುವೆ ಪೈಪೋಟಿ ಏರ್ಪಟ್ಟು ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳು ಅಕ್ರಮ ಎಸಗಿದರೆ, ರೈತರಿಗೆ ಹಣ ಸರಿಯಾಗಿ ನೀಡದಿದ್ದರೆ, ಅಂತಹ ಪರವಾನಗಿಯನ್ನೇ ರದ್ದುಪಡಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.