ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ: ಮಾರ್ಗಸೂಚಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣ</p></div>

ಚಿನ್ನಸ್ವಾಮಿ ಕ್ರೀಡಾಂಗಣ

   

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಆಯೋಜನೆ ಸಂಬಂಧ ನಗರ ಪೊಲೀಸ್ ಕಮಿಷನರ್‌, ಜಿಬಿಎ ಮುಖ್ಯ ಆಯುಕ್ತರ ನೇತೃತ್ವದ ತಂಡ ಸೋಮವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಸುಮಾರು ಅರ್ಧ ತಾಸು ಕ್ರೀಡಾಂಗಣ ಪರಿಶೀಲಿಸಿದ ತಂಡದ ಸದಸ್ಯರು ಬಳಿಕ ಕೆಎಸ್‌ಸಿಎ ಅಧಿಕಾರಿಗಳ ಜತೆ ಸಭೆ ನಡೆಸಿದರು.

ADVERTISEMENT

ಕೆಲ ತಿಂಗಳ ಹಿಂದೆ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಪೊಲೀಸ್ ಇಲಾಖೆ 17 ಅಂಶಗಳ ಸಲಹೆ, ಸೂಚನೆಗಳನ್ನು ನೀಡಿತ್ತು. ಆದರೆ, ಇವುಗಳ ಪೈಕಿ ಯಾವ ಸೂಚನೆಗಳನ್ನೂ ಪಾಲಿಸಿಲ್ಲ ಎಂದು ಪೊಲೀಸ್ ಕಮಿಷನರ್‌ ಬೇಸರ ವ್ಯಕ್ತಪಡಿಸಿದರು.

ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಸಹ ಕೆಎಸ್‌ಸಿಎ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಂಗಣದಲ್ಲಿ ಅಗ್ನಿ ನಂದಿಸುವ ಉಪಕರಣಗಳ ಅಳವಡಿಕೆ ಹಾಗೂ ಮಾರ್ಪಾಡುಗಳ ಬಗ್ಗೆ 2022ರಲ್ಲೇ ಸಲಹೆ ನೀಡಲಾಗಿತ್ತು ಆದರೆ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕಾಲ್ತುಳಿತದಂತಹ ಅವಘಡ ನಡೆದರೂ ಎಚ್ಚೆತ್ತುಕೊಂಡಿಲ್ಲ. ಕಾಲ್ತುಳಿತದ ಬದಲು ಅಗ್ನಿ ಅವಘಡ ನಡೆದಿದ್ದರೆ ಯಾರು ಹೊಣೆ ಆಗುತ್ತಿದ್ದರು? ಎಂದು ಕೆಎಸ್‌ಸಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ ಕುಮಾರ್‌ ಸಿಂಗ್, ಅಗ್ನಿಶಾಮಕ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಆರೋಗ್ಯ ಇಲಾಖೆ ಆಯುಕ್ತರು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.