ADVERTISEMENT

‘ನಂಬಿಕೆ ನಕ್ಷೆ’ ಯೋಜನೆಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್‌

'ನಿಮ್ಮ ಮನೆ ನಕ್ಷೆ, ನಿಮ್ಮ ಮನೆ ಬಾಗಿಲಿಗೆ’ ಕಲ್ಪನೆಯ ಆನ್‌ಲೈನ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 0:25 IST
Last Updated 12 ಮಾರ್ಚ್ 2024, 0:25 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ಬಿಬಿಎಂಪಿ ಕಚೇರಿಗೆ ಹೋಗದೆ 15 ದಿನಗಳಲ್ಲಿ ಕಟ್ಟಡ ನಕ್ಷೆ ಪಡೆಯುವ ‘ನಂಬಿಕೆ ನಕ್ಷೆ’– ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೋಮವಾರ ಚಾಲನೆ ನೀಡಿದರು.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ಈ ಯೋಜನೆ ಜಾರಿಗೆ ತರಲಾಗಿದ್ದು, 50 x 80 ಅಡಿ ಅಳತೆವರೆಗಿನ ಕಟ್ಟಡಗಳಿಗೆ ಆಟೊಮೆಟೆಡ್‌ ಕಟ್ಟಡ ನಕ್ಷೆಗೆ ಮಂಜೂರಾತಿ 15 ದಿನಗಳಲ್ಲಿ ಸಿಗಲಿದೆ. ಸಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸದೆ ಅಥವಾ ಅರ್ಜಿಯನ್ನು ಪರಿಶೀಲಿಸದೆ ಇದ್ದರೆ 15 ದಿನಗಳಲ್ಲಿ ಸ್ವಯಂ ಚಾಲಿತವಾಗಿ ನಕ್ಷೆ ಮಂಜೂರಾಗುತ್ತದೆ ಎಂದರು.

ಪ್ರಕ್ರಿಯೆ ಹೇಗೆ?:

ADVERTISEMENT

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bpas.bbmpgov.in/BPAMSClient4/Default.aspx?TAV-1) ಪ್ರಮಾಣೀಕೃತ ಆರ್ಕಿಟೆಕ್ಟ್‌ಗಳು ಅಥವಾ ಎಂಜಿನಿಯರ್‌ಗಳು, ಮಾಲೀಕರು ಒದಗಿಸುವ ದಾಖಲೆಗಳು ಮತ್ತು ಕಟ್ಟಡ ನಕ್ಷೆಯನ್ನು ನಿಯಮಾನುಸಾರ ಅಪ್‌ಲೋಡ್‌ ಮಾಡಬೇಕು. 

ಆಸ್ತಿ ದಾಖಲೆ ಹಾಗೂ ನಕ್ಷೆಯನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ ಆರ್‌ಎಸ್‌ಎಸಿ) ವತಿಯಿಂದ ಆನ್‌ಲೈನ್‌ನಲ್ಲೇ ಪರಿಶೀಲಿಸಿ, ಕೆರೆ, ಸರ್ಕಾರಿ ಪ್ರದೇಶಗಳ ಯಾವುದೇ ಬಫರ್‌ ಝೋನ್‌ನಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸಲಾಗುತ್ತದೆ. ಆಟೊ ಡಿಸಿಆರ್‌ ಮೂಲಕ ವರದಿ ಸಿದ್ಧಗೊಂಡು, ಪಾವತಿ ಶುಲ್ಕದ ವಿವರ ನೀಡಲಾಗುತ್ತದೆ. ಇ–ಪೇಮೆಂಟ್‌ ಮಾಡಿದ ಕೂಡಲೇ ತಾತ್ಕಾಲಿಕ ನಕ್ಷೆ ಹಾಗೂ ಅನುಮತಿ ಪತ್ರವನ್ನು ನೀಡಲಾಗುತ್ತದೆ.

ಇದಾದ ನಂತರದ 15 ದಿನಗಳಲ್ಲಿ, ಕಂದಾಯ ಅಧಿಕಾರಿಗಳು, ನಗರ ಯೋಜನೆ ಅಧಿಕಾರಿಗಳು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಕ್ಷೆಯನ್ನು ಮಂಜೂರು ಮಾಡುತ್ತಾರೆ. ದಾಖಲೆಗಳಲ್ಲಿ ಯಾವುದಾದರೂ ಸಮಸ್ಯೆ ಅಥವಾ ತಪ್ಪಿದ್ದರೆ ಬಿಬಿಎಂಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ‘ತಾತ್ಕಾಲಿಕ ನಕ್ಷೆ’ಯನ್ನು ರದ್ದುಗೊಳಿಸಿ, ಕಟ್ಟಡ ನಿರ್ಮಿಸದಂತೆ ನಿರ್ಬಂಧಿಸಲಾಗುತ್ತದೆ. ಕಟ್ಟಡ ಕಾಮಗಾರಿ ಆರಂಭವಾಗಿದ್ದರೆ ನಿಯಮಾವಳಿ ಪ್ರಕಾರ ಕ್ರಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.