
ಬೆಂಗಳೂರು: ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಡಿಜಿಟಲ್ ಸೇರಿದಂತೆ ವಿವಿಧ ಸವಾಲುಗಳಿಗೆ ಪರಿಹಾರ ನೀಡುವ ನವೋದ್ಯಮಗಳನ್ನು ವಿಶ್ವವಿದ್ಯಾಲಯಗಳು ಸಕ್ರಿಯವಾಗಿ ಪ್ರೋತ್ಸಾಹಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿ (ಎಐಯು) ಹಾಗೂ ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ದಕ್ಷಿಣ ವಲಯದ ಕುಲಪತಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಕ್ಷಿಣ ಭಾರತ ಸದಾ ನಾಯಕತ್ವ ನೀಡಿದೆ. ಶಿಕ್ಷಣ, ಸಂಶೋಧನೆ ಮತ್ತು ಉದ್ಯಮಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಬೆಂಗಳೂರು ಸೇರಿದಂತೆ ಹಲವು ನಗರಗಳು ಜಾಗತಿಕ ಮಟ್ಟದ ನವೋದ್ಯಮಗಳಿಗೆ ವೇದಿಕೆಯಾಗುತ್ತವೆ ಎಂಬುದನ್ನು ಕಂಡಿದ್ದೇವೆ. ಈ ಮಾದರಿಯನ್ನು ದೇಶದ ಇತರ ನಗರಗಳಿಗೂ ವಿಸ್ತರಿಸಬೇಕು ಎಂದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳ ಪೋಷಣೆ ಎಂಬ ಸಮ್ಮೇಳನದ ವಿಷಯ ಅತ್ಯಂತ ಪ್ರಾಸಂಗಿಕವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವ ಕೇಂದ್ರಗಳಷ್ಟೇ ಅಲ್ಲ. ಅವು ನವೋದ್ಯಮ, ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಕೇಂದ್ರಗಳಾಗಿವೆ. ಯುವ ಮನಸ್ಸುಗಳು ಅತ್ಯಮೂಲ್ಯ ಸಂಪತ್ತಾಗಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ, ಸಂಪನ್ಮೂಲ ಮತ್ತು ಅವಕಾಶಗಳು ದೊರೆತರೆ ಅವರ ಕಲ್ಪನೆಗಳು ಆತ್ಮನಿರ್ಭರತೆಯನ್ನು ಸಾಧಿಸುತ್ತವೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಿ, ಸಮಾಜ ಮತ್ತು ರಾಷ್ಟ್ರಕ್ಕೆ ಲಾಭವಾಗುತ್ತವೆ ಎಂದು ಹೇಳಿದರು.
ಕುಲಪತಿ ಕುಲದೀಪ್ ಕುಮಾರ್ ರೈನಾ ಮಾತನಾಡಿ, ‘ಸಮ್ಮೇಳನ ಎರಡು ದಿನ ನಡೆಯಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಕೇರಳ ರಾಜ್ಯಗಳಿಂದ 120ಕ್ಕೂ ಹೆಚ್ಚು ಕುಲಪತಿಗಳು, ಶಿಕ್ಷಣ ತಜ್ಞರು, ಶೈಕ್ಷಣಿಕ ನಾಯಕರು ಭಾಗವಹಿಸಿದ್ದಾರೆ’ ಎಂದರು.
‘ವಿಶ್ವವಿದ್ಯಾಲಯಗಳು ನವೋದ್ಯಮವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಸ್ವಯಂ ಉದ್ಯಮಿಗಳನ್ನಾಗಿ ರೂಪಿಸಲು ಗಮನಹರಿಸಬೇಕು’ ಎಂದು ಆನ್ವಯಿಕ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ಜಯರಾಂ ಹೇಳಿದರು.
ಎಐಯು ಅಧ್ಯಕ್ಷ ಪ್ರೊ. ವಿನಯ್ ಕುಮಾರ್ ಪಾಠಕ್, ಪ್ರಧಾನ ಕಾರ್ಯದರ್ಶಿ ಪಂಕಜ್ ಮಿತ್ತಲ್, ಕುಲಸಚಿವ ಎಸ್. ಅಶೋಕ್ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.