ADVERTISEMENT

ರಾಜ್ಯ ಶಿಕ್ಷಣ ನೀತಿ ಸಮಗ್ರವಾಗಿ ಅನುಷ್ಠಾನಗೊಳಿಸಿ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 13:57 IST
Last Updated 16 ಆಗಸ್ಟ್ 2025, 13:57 IST
<div class="paragraphs"><p>ಪುರುಷೋತ್ತಮ ಬಿಳಿಮಲೆ</p></div>

ಪುರುಷೋತ್ತಮ ಬಿಳಿಮಲೆ

   

ಬೆಂಗಳೂರು: ‘ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಬೇಕು. ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ಈ ವರದಿ ಸಮಗ್ರವಾಗಿ ಜಾರಿಗೆ ಬರುವುದು ಮುಖ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ‘ಆಧುನಿಕ ಸಮಾಜವು ತಂದೊಡ್ಡುವ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಹೊಸ ತಲೆಮಾರಿನಲ್ಲಿ ತುಂಬಲು, ಸಶಕ್ತವಾಗಿರುವ ರಾಜ್ಯ ಶಿಕ್ಷಣ ನೀತಿಯನ್ನು ಪೂರ್ತಿಯಾಗಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ರಾಜ್ಯ ಶಿಕ್ಷಣ ನೀತಿ ಆಯೋಗವು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ಪರಿಹಾರೋಪಾಯಗಳನ್ನು ಶಿಫಾರಸು ಮಾಡಿದೆ. ಇದನ್ನು ಅನುಷ್ಠಾನ ಮಾಡುವುದರಿಂದ ಮುಂದಿನ 10 ವರ್ಷಗಳಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರವು ಆಮೂಲಾಗ್ರ ಬದಲಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ವರದಿಯಲ್ಲಿ ರಾಜ್ಯಕ್ಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ದ್ವಿಭಾಷಾ ನೀತಿಯನ್ನು ಶಿಫಾರಸು ಮಾಡಿರುವುದು ಅತ್ಯಂತ ಸಮಯೋಚಿತ. ಭಾಷಾ ಪ್ರಾವೀಣ್ಯತೆ ಹೆಚ್ಚಿಸಲು ಮತ್ತು ಬೋಧನಾ ವಿಭಾಗದ ಗುಣಮಟ್ಟವನ್ನು ಉನ್ನತೀಕರಿಸಲು, ಭಾಷಾ ಬೋಧನೆ, ತರಬೇತಿ ಕೇಂದ್ರ ಮತ್ತು ಜ್ಞಾನ, ಅನುವಾದ ಕೇಂದ್ರಗಳ ಸ್ಥಾಪನೆಗೆ ವರದಿ ಒತ್ತಾಯಿಸಿರುವುದು ಐತಿಹಾಸಿಕ ನಿಲುವು. ಸರ್ಕಾರ ಈ ವರದಿಯನ್ನು ಒಪ್ಪುವ ಮೂಲಕ ಭಾಷೆಯ ಬೆಳವಣಿಗೆಗೆ ಕೈ ಜೋಡಿಸಬೇಕು’ ಎಂದು ಹೇಳಿದ್ದಾರೆ.

‘ಇಂಗ್ಲಿಷೇತರ ಭಾಷೆಗಳನ್ನು ಕಡೆಗಣಿಸಿಲ್ಲ’:

ರಾಜ್ಯ ಶಿಕ್ಷಣ ನೀತಿ ಆಯೋಗವು ದ್ವಿಭಾಷಾ ನೀತಿಯನ್ನು ಶಿಫಾರಸು ಮಾಡುವಾಗ ಕನ್ನಡ ಮತ್ತು ಇಂಗ್ಲಿಷೇತರ ಭಾಷೆಗಳನ್ನು ಕಡೆಗಣಿಸಿಲ್ಲದಿರುವುದು ಮಹತ್ವದ ಸಂಗತಿ ಎಂದು ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. ‘ಈ ವರದಿಯಂತೆ ರಾಜ್ಯ ಭಾಷೆಯಾದ ಕನ್ನಡವು ಮೊದಲನೆಯ ಅಥವಾ ಎರಡನೆಯ ಭಾಷೆಯಾಗಿ ಕಡ್ಡಾಯವಾಗಿ ಉಳಿಯಲಿದೆ. ಆಸಕ್ತ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿಯೂ ತಾವು ಇಚ್ಛಿಸುವ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಿರುವುದು ಇವತ್ತಿನ ಸಂಕೀರ್ಣ ಭಾಷಾ ಪರಿಸರದಲ್ಲಿ ಅನುಷ್ಠಾನ ಯೋಗ್ಯವಾಗಿದೆ’ ಎಂದು ತಿಳಿಸಿದ್ದಾರೆ. ‘ತ್ರಿಭಾಷಾ ಸೂತ್ರವು ಹಿಂದಿಯ ಯಜಮಾನಿಕೆಯನ್ನು ಬಲವಂತವಾಗಿ ಹೇರುವ ಸೂತ್ರವೇ ಹೊರತು ಅರಿವಿನ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ಉತ್ತಮಗೊಳಿಸಲು ಯಾವುದೇ ಸಹಾಯವಾಗಿಲ್ಲ. ಇದನ್ನು ಸಂಶೋಧನೆಗಳೇ ದೃಢಪಡಿಸಿವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.