ADVERTISEMENT

ರಾಜ್ಯ ಮುಕ್ತ ವಿ.ವಿ. ಘೋಷಣೆ: ಪ್ರತಿವರ್ಷ ಎರಡು ಬಾರಿ ಪ್ರವೇಶ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:35 IST
Last Updated 9 ಅಕ್ಟೋಬರ್ 2018, 20:35 IST
   

ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಮಾನ್ಯತೆ ರದ್ದಾದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) 2013–14, 2014–15ನೇ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ತೆರೆದಿದೆ. ಆ ಸಾಲಿನ ಆಸಕ್ತರು ವಿವಿಯ ತಾಂತ್ರಿಕೇತರ ಕೋರ್ಸ್‌ಗಳಿಗೆ ಮತ್ತೆ ಮೊದಲ ವರ್ಷಕ್ಕೆ ಪ್ರವೇಶ ಪಡೆದರೆ ಬೋಧನಾ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ನೀಡಲಾಗುತ್ತಿದೆ.

ಕೆಎಸ್‌ಒಯು ಪ್ರತಿವರ್ಷ ಎರಡು ಬಾರಿ ಪ್ರವೇಶ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ. ಇನ್ನುಮುಂದೆ ಪ್ರತಿ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ.

‘ಮಾನ್ಯತೆಯ ಪ್ರಕ್ರಿಯೆ ವಿಳಂಬವಾದ್ದರಿಂದ ಜುಲೈ ತಿಂಗಳಿನ ದಾಖಲಾತಿ ತಡವಾಗಿ ಆರಂಭಗೊಂಡಿದೆ. ಈ ಸಾಲಿನಲ್ಲಿ ಮಾನ್ಯತೆ ಪಡೆದಿರುವ 31 ಕೋರ್ಸ್‌ಗಳಿಗೆ ಸೇರಲು ಅಕ್ಟೋಬರ್‌ 20 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2014ನೇ ಸಾಲಿನ ಬೋಧನಾ ಶುಲ್ಕವನ್ನೇ ಮುಂದುವರಿಸಲಾಗಿದೆ’ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಮಹಿಳೆಯರು ಕೋರ್ಸ್‌ಗಳಿಗೆ ದಾಖಲಾದರೆ, ಬೋಧನಾ ಶುಲ್ಕದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗಿದೆ. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಇದೆ.

ವಿದ್ಯಾರ್ಥಿಗಳ ಕುಂದು–ಕೊರತೆ ಪರಿಹಾರಕ್ಕಾಗಿ ಕೆಎಸ್‌ಒಯು ಜಾಲತಾಣದಲ್ಲಿ ಲಿಂಕ್‌ ಒಂದನ್ನು ಸೃಜಿಸಲಾಗಿದೆ. ಇಲ್ಲಿ ನೋಂದಣಿಯಾಗಿ ದೂರು ದಾಖಲಿಸಬಹುದು. ಅಭ್ಯರ್ಥಿಗಳಿಗೆ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ, ಪದವಿ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರಗಳನ್ನು ಆನ್‌ಲೈನ್‌ ಮೂಲಕ ಒದಗಿಸಲು ನ್ಯಾಷನಲ್‌ ಅಕಾಡೆಮಿಕ್‌ ಡೆಪಾಸಿಟರಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.