ADVERTISEMENT

ಕಸ ಪುನರ್‌ ಬಳಕೆ ಪಾರ್ಕ್‌ ಸ್ಥಾಪನೆ ಪ್ರಸ್ತಾವಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 20:41 IST
Last Updated 8 ಡಿಸೆಂಬರ್ 2020, 20:41 IST
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ಸ್ಥಳೀಯರ ಪ್ರತಿರೋಧದ ಕಾರಣದಿಂದ ಕನಕಪುರ ಹಾಗೂ ಮಧುಗಿರಿಯಲ್ಲಿ ಸಾವಿರ ಎಕರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ತ್ಯಾಜ್ಯ ಪುನರ್‌ ಬಳಕೆ ಪಾರ್ಕ್‌ ಯೋಜನೆಯ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎನ್‌.ಎ. ಹ್ಯಾರಿಸ್‌ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರ ನೀಡಿದ ಮಾಧುಸ್ವಾಮಿ, ’ನಗರದ ತ್ಯಾಜ್ಯ ವಿಲೇ
ವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು
ಕೊಳ್ಳಲು ಈ ಪಾರ್ಕ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು‘ ಎಂದರು.

’ನಗರದಲ್ಲಿ ನಿತ್ಯ 5500 ಟನ್‌ ಕಸ ಉತ್ಪಾದನೆಯಾಗುತ್ತಿದೆ. ಮನೆಗಳಿಂದಲೇ 4 ಸಾವಿರ ಟನ್‌ ಕಸ ಸಂಗ್ರಹಿಸಲಾಗುತ್ತಿದೆ. ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಎರಡು ವರ್ಷಗಳಲ್ಲಿ 4 ಸಾವಿರ ಟನ್‌ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳು ಕಾರ್ಯಾರಂಭ ಮಾಡಲಿವೆ. ಆಗ ಕಸ ಸಮಸ್ಯೆಗೆ ಪರಿಹಾರ
ಸಿಗಲಿದೆ‘ ಎಂದರು.

ADVERTISEMENT

ದೊಡ್ಡಬಳ್ಳಾಪುರಕ್ಕೆ ಸಂಸ್ಕರಿಸಿದ ನೀರು: ದೊಡ್ಡಬಳ್ಳಾಪುರ ತಾಲ್ಲೂಕಿನ ಕೆರೆಗಳಿಗೆ ವೃಷಭಾವತಿ ನದಿಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆ ಮೂಲಕ ತುಂಬಿಸಲು ಯೋಜಿಸಲಾಗಿದೆ. ಈ ಯೋಜನೆಗೆ ₹1400 ಕೋಟಿ ವೆಚ್ಚ ಆಗಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕಾಂಗ್ರೆಸ್‌ನ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ’ಮೊದಲ ಹಂತದಲ್ಲಿ ನೆಲಮಂಗಲಕ್ಕೆ (₹673 ಕೋಟಿ ವೆಚ್ಚ), ಬಳಿಕ ದಾಬಸ್‌ಪೇಟೆಗೆ (₹410 ಕೋಟಿ ವೆಚ್ಚ) ಹಾಗೂ ನಂತರ ದೊಡ್ಡಬಳ್ಳಾಪುರಕ್ಕೆ (₹415) ಸಂಸ್ಕರಿಸಿದ ನೀರು ಪೂರೈಸಲಾಗುವುದು. ದೊಡ್ಡಬಳ್ಳಾಪುರದ ಜನರಿಗೆ ಯೋಜನೆಯ ಲಾಭ ಸಿಗಲು ಎರಡು ವರ್ಷಗಳು ಬೇಕು‘ ಎಂದು ಹೇಳಿದರು.

ಹೋರ್ಡಿಂಗ್‌ನಲ್ಲಿ ಲೂಟಿಗೆ ಅವಕಾಶ: ಹೆಬ್ಬಾಳ ಮೇಲ್ಸೇತುವೆ ಮೇಲೆ 147 ಹೋರ್ಡಿಂಗ್‌ಗಳನ್ನು ಅಳವಡಿಸಲು ಖಾಸಗಿ ಸಂಸ್ಥೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ಲೂಟಿಗೆ ಅನುವು ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಆರೋಪಿಸಿದರು.

’ಸರ್ಕಾರಕ್ಕೆ ತಿಂಗಳಿಗೆ ₹2.5 ಕೋಟಿ ವರಮಾನ ಬರಲು ಸಾಧ್ಯವಿದೆ. ಆದರೆ, ಕಡಿಮೆ ಮೊತ್ತಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದವನ್ನು ಪರಾಮರ್ಶೆ ಮಾಡಬೇಕು‘ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.