
ಬೆಂಗಳೂರು: ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದ ₹1.76 ಕೋಟಿ ಮೌಲ್ಯದ ಸ್ವತ್ತುಗಳನ್ನು ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಮಾಲೀಕರಿಗೆ ಹಸ್ತಾಂತರಿಸಿದರು.
ಮಲ್ಲೇಶ್ವರ ಮೈದಾನದಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಚಿನ್ನಾಭರಣ, ವಿವಿಧ ಮಾದರಿಯ ವಾಹನಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು.
ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಹ್ಮಣ್ಯಪುರ, ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಯಶವಂತಪುರ, ಆರ್‌ಎಂಸಿ ಯಾರ್ಡ್, ಜಾಲಹಳ್ಳಿ, ಜೆ.ಸಿ ನಗರ, ಆರ್.ಟಿ ನಗರ, ಸಂಜಯನಗರ, ಹೆಬ್ಬಾಳ ಠಾಣೆಯ ಪೊಲೀಸರು, ಕಳೆದ ಕೆಲವು ತಿಂಗಳಿಂದ ಕಾರ್ಯಾಚರಣೆ ನಡೆಸಿ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳಿಂದ ಚಿನ್ನ–ಬೆಳ್ಳಿಯ ಆಭರಣ, ಮೊಬೈಲ್ ಫೋನ್‌ಗಳು, ಕಾರು, ಬೈಕ್ ಹಾಗೂ ಆಟೊರಿಕ್ಷಾಗಳನ್ನು ವಶ ಪಡಿಸಿಕೊಂಡಿದ್ದರು. ಆ ಸ್ವತ್ತುಗಳನ್ನು ಮಾಲೀಕರಿಗೆ ಶುಕ್ರವಾರ ಹಸ್ತಾಂತರ ಮಾಡಲಾಯಿತು.
ಹಗಲು–ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ, ಮನೆಯ ಎದುರು ಹಾಗೂ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ವಾಹನಗಳ ಕಳ್ಳತನ ಸೇರಿದಂತೆ 75 ಪ್ರಕರಣಗಳನ್ನು ಭೇದಿಸಿ ಒಟ್ಟು 83 ಆರೋಪಿಗಳನ್ನು ಬಂಧಿಸಲಾಗಿದೆ. 1 ಕೆ.ಜಿ 879 ಗ್ರಾಂ ಚಿನ್ನಾಭರಣ, 4 ಗ್ರಾಂ ವಜ್ರದ ಆಭರಣ, 1 ಕೆ.ಜಿ 783 ಗ್ರಾಂ ಬೆಳ್ಳಿಯ ಸಾಮಗ್ರಿ, 54 ದ್ವಿಚಕ್ರ ವಾಹನಗಳು, ಎರಡು ತ್ರಿಚಕ್ರ ವಾಹನಗಳು, ಒಂದು ನಾಲ್ಕು ಚಕ್ರದ ವಾಹನ, ವಿವಿಧ ಕಂಪನಿಯ 67 ಮೊಬೈಲ್ ಫೋನ್‌ಗಳು, ಒಂದು ಲ್ಯಾಪ್‌ಟಾಪ್, ಒಂದು ಟಿ.ವಿ, ₹3 ಲಕ್ಷ ನಗದು ಜಪ್ತಿ ಮಾಡಲಾಗಿತ್ತು ಎಂದು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದರು.
ಉತ್ತರ ವಿಭಾಗದ 13 ಠಾಣೆಗಳ ಪೊಲೀಸರು ಉತ್ತಮ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಸಿ.ವಂಶಿ ಕೃಷ್ಣ ಹಾಜರಿದ್ದರು.
ನಗರದಲ್ಲಿ ಕಳ್ಳತನ ಪ್ರಕರಣಗಳು ತಗ್ಗಿವೆ. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕಳ್ಳತನ ಪ್ರಕರಣಗಳು ನಡೆದರೂ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗುತ್ತಿದೆಸೀಮಾಂತ್ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.