ಬೆಂಗಳೂರು: ನಗರವನ್ನು ಸ್ವಚ್ಛ, ಸ್ವಸ್ಥ ಹಾಗೂ ಸುಂದರವಾಗಿ ಉಳಿಸಿಕೊಳ್ಳುವ ಸಲುವಾಗಿ ‘ಸಾರ್ವಜನಿಕ ಸ್ಥಳಗಳಲ್ಲಿ ‘ಉಗುಳುವುದನ್ನು ನಿಲ್ಲಿಸಿ’ ಎಂಬ ಜಾಗೃತಿ ಅಭಿಯಾನವನ್ನು ಬಿಬಿಎಂಪಿ ಹಮ್ಮಿಕೊಂಡಿದೆ.
ಈ ಅಭಿಯಾನದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಬಿಎಂಪಿ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್, ‘ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಎಲ್ಲೆಂದರಲ್ಲಿ ಉಗುಳುವುದು ತಪ್ಪು. ಇದರಿಂದ ಕೋವಿಡ್, ಕ್ಷಯದಂತಹ ರೋಗಗಳು ಹರಡಲಿವೆ. ಬಾಯಲ್ಲಿ ತಂಬಾಕು ಜಗಿದು, ನಗರದ ಸಂಚಾರ ಸಿಗ್ನಲ್, ಬಸ್ ನಿಲ್ದಾಣ, ಪ್ರಯಾಣಿಕರ ತಂಗುದಾಣ, ರಸ್ತೆ ವಿಭಜಕ, ಉದ್ಯಾನ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಉಗುಳಿದರೆ ಆ ಸ್ಥಳಗಳ ಸೌಂದರ್ಯವೂ ಹಾಳಾಗಲಿದೆ. ಎಲ್ಲರೂ ರಾಜಾರೋಷವಾಗಿ ಉಗುಳುತ್ತಾರೆ. ಯಾರಲ್ಲೂ ಈ ಬಗ್ಗೆ ಪಶ್ಚಾತ್ತಾಪದ ಭಾವನೆ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ₹ 1 ಸಾವಿರ ದಂಡ ವಿಧಿಸಲು ಪಾಲಿಕೆಯ ಕಸ ನಿರ್ವಹಣೆ ಬೈಲಾದಡಿ ಅವಕಾಶವಿದೆ. ದಂಡ ವಿಧಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ’ ಎಂದರು.
ಮಾರ್ಷಲ್‌ಗಳು ಮತ್ತು ಸ್ವಯಂಸೇವಕರು ನಗರದ ಗರುಡಾ ಮಾಲ್, ಬ್ರಿಗೇಡ್ ರಸ್ತೆ ಮೂಲಕ ಚರ್ಚ್ ಸ್ಟ್ರೀಟ್‌ವರೆಗೆ ಜಾಗೃತಿ ಜಾಥಾ ನಡೆಸಿದರು. ‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ’ ಎಂಬ ಸ್ಟಿಕ್ಕರ್‌ಗಳನ್ನು ವಾಹನ ಚಾಲಕರಿಗೆ ವಿತರಿಸಲಾಯಿತು. ಅಂಗಡಿ– ಮಳಿಗೆಗಳ ಮುಂಭಾಗದಲ್ಲೂ ಜಾಗೃತಿ ಫಲಕ ಅಂಟಿಸಲಾಯಿತು.
ಈ ಅಭಿಯಾನಕ್ಕೆ ರೋಟರಿ, ನಮ್ಮ ಬೆಂಗಳೂರು ಫೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಹಾಗೂ ಇತರ ಸಂಸ್ಥೆಗಳು ಕೈಜೋಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.