ADVERTISEMENT

ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ: ಡಾ.ಜಿ.ಪರಮೇಶ್ವರ

ಕಡ್ಡಾಯಗೊಳಿಸಲು ಕಾನೂನು

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:51 IST
Last Updated 21 ಜೂನ್ 2019, 19:51 IST
'ಸುವರ್ಣ ಭವನ' ನೂತನ ಕಟ್ಟಡ –ಪ್ರಜಾವಾಣಿ ಚಿತ್ರ
'ಸುವರ್ಣ ಭವನ' ನೂತನ ಕಟ್ಟಡ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದನೀರಿನ‌ ಬವಣೆ ನೀಗಿಸಲು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಕಡ್ಡಾಯವಾಗಿತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಕೆಗೆ ಕಾನೂನು ರೂಪಿಸಲಾಗುವುದು. ಇಲ್ಲದಿದ್ದರೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡುವುದಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಲ್ಲೇಶ್ವರದಲ್ಲಿ ಜಲಮಂಡಳಿ ನಿರ್ಮಿಸಿರುವ ‘ಸುವರ್ಣ ಭವನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುತ್ತಾರೆ. ಅದನ್ನು ಎಲ್ಲಿಂದ ತರುತ್ತಾರೆ ಎಂಬುದು ಗೊತ್ತಿಲ್ಲ. ಕೆಲವೊಮ್ಮೆ ಬಳಕೆಗೆ ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತದೆ. ಇದರಿಂದ ನಿವಾಸಿಗಳಿಗೆ ಕಜ್ಜಿ, ಚರ್ಮದ ಸಮಸ್ಯೆಗಳು ಬಂದು ಮನೆ ಖಾಲಿ ಮಾಡಿರುವ ಉದಾಹರಣೆಗಳಿವೆ. ಹೀಗಾಗಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಮಾಲೀಕರು ಕಡ್ಡಾಯವಾಗಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಬೇಕು’ ಎಂದರು.

ADVERTISEMENT

‘ನಗರದಲ್ಲಿರುವ 1.3 ಕೋಟಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ನಗರಕ್ಕೆ ಕಾವೇರಿ ನೀರು
ಬಿಟ್ಟರೆ ಬೇರೆ ಯಾವ ನೀರಿನ ಮೂಲವಿಲ್ಲ. ₹5,500 ಕೋಟಿ ವೆಚ್ಚದಲ್ಲಿ 5ನೇ ಹಂತದ ಯೋಜನೆಗೆ ಸಿದ್ಧತೆ ನಡೆದಿದೆ. ₹340 ಕೋಟಿ
ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನಶ್ಚೇತನ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಲಿಂಗನಮಕ್ಕಿಯಿಂದ ನೀರು ಪೂರೈಕೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಸೂಚಿಸಿದ್ದೇನೆ. ಸಮುದ್ರಕ್ಕೆ
ಸೇರುವ ನೀರನ್ನು ಇಲ್ಲಿಗೆ ತರಲು ಯೋಜಿಸಿದ್ದೇವೆ. ಅಲ್ಲಿಂದ ಕನಿಷ್ಠ 10 ಟಿಎಂಸಿ ಅಡಿ ನೀರನ್ನು ಪೂರೈಕೆ ಮಾಡಲಿದ್ದೇವೆ. ಆದರೆ, ಇದಕ್ಕೂ ವಿರೋಧ ವ್ಯಕ್ತವಾಗುತ್ತಿದ್ದು, ಅವರ ಮನವೊಲಿಸಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ನಾಲ್ಕು ದಿಕ್ಕಿನಲ್ಲಿ ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣ
ನಗರದ ಕೇಂದ್ರ ಭಾಗದಲ್ಲಿ ಮಾತ್ರ ಬೃಹತ್‌ ಆಸ್ಪತ್ರೆಗಳಿವೆ. ಜನರು ದೂರದ ಊರಿನಿಂದ ಇಲ್ಲಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ 4 ಮಲ್ಟಿಸ್ಪೆಷಾಲಟಿ ಆಸ್ಪತ್ರೆಗಳನ್ನು ನಿರ್ಮಿಸಲಿದ್ದೇವೆ ಎಂದು ಪರಮೇಶ್ವರ ಹೇಳಿದರು.

‘ಕಂಠೀರವ ಕ್ರೀಡಾಂಗಣ ಬಿಟ್ಟರೆ ಸರಿಯಾದ ಕ್ರೀಡಾಂಗಣಗಳಿಲ್ಲ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ನಾಲ್ಕು ಕಡೆ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ಹೊರವಲಯದಲ್ಲಿ 500 ಎಕರೆಯಲ್ಲಿ ಉದ್ಯಾನ ನಿರ್ಮಿಸಿದರೆ ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗಲು ಅನುಕೂಲವಾಗಲಿದೆ. ಈ ಬಗ್ಗೆ ಯೋಜನೆ ರೂಪಿಸುತ್ತೇವೆ’ ಎಂದರು.

ಸುವರ್ಣ ಭವನದ ವಿಶೇಷಗಳೇನು?
ವೆಚ್ಚ; ₹25.75 ಕೋಟಿ
ವಿಸ್ತೀರ್ಣ;15,250 ಚ.ಮೀ
ಅಂತಸ್ತು; 3
7 ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ
ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸಭಾಂಗಣ
ತ್ಯಾಜ್ಯ ನೀರು ಸಂಸ್ಕರಣಾ ಘಟಕ
ಮಳೆ ನೀರು ಸಂಗ್ರಹ ವ್ಯವಸ್ಥೆ
ವಿದ್ಯುತ್‌ ಪೂರೈಕೆಗೆ 300 ಕಿಲೋವಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.