
ಮಾನ್ಯರೆ,
ಹೆಚ್.ಎಸ್.ಆರ್. ಲೇಔಟ್, ಕೋರಮಂಗಲ, ಬಿ.ಟಿ.ಎಂ.ಲೇಔಟ್, ಮಲ್ಲೆಶ್ವರಂ, ಬಸವನ ಗುಡಿ ಬಳಿ ಇರುವ ಪಾರ್ಕುಗಳ ಸುತ್ತಮುತ್ತ ಮತ್ತು ಬಡಾವಣೆಗಳಲ್ಲಿ ಸಾಕು ನಾಯಿಗಳ ಕಾಟ ಹೆಚ್ಚಾಗಿದೆ. ಈ ನಾಯಿಗಳನ್ನು ಸಾಕುತ್ತಿರುವ ಮಾಲೀಕರು ಬೇರೆಯವರ ಮನೆಗಳ ಮುಂದೆ, ಪಾರ್ಕುಗಳ ಸುತ್ತಮುತ್ತ ಮತ್ತು ಚರಂಡಿಗಳ ಆಸುಪಾಸು ಮಲ-ಮೂತ್ರ ವಿಸರ್ಜನೆ ಮಾಡಿಸಿ ಪರಿಸರ ಹಾಳು ಮಾಡುತ್ತಿರುವುದಲ್ಲದೇ, ರೋಗಗಳಿಗೂ ಕಾರಣವಾಗುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ಪ್ರದೇಶದ ಮನೆಗಳಲ್ಲಿ ವಾಸಿಸುವ ಮನೆ ಮಾಲೀಕರು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ. ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ.
ಸರ್ಕಾರ ಅಥವಾ ಮಹಾನಗರ ಪಾಲಿಕೆ ಈ ಬಗ್ಗೆ ಹೆಚ್ಚಾಗಿ ಗಮನವಹಿಸಿ ಸಾರ್ವಜನಿಕರಿಗೆ ನೆರವಾಗಬೇಕು. ಮುಂದೆ ಆಗಲಿರುವ ಪ್ರಮಾದಗಳನ್ನು ತಡೆಗಟ್ಟಲು ಎಚ್ಚರಿಕೆ ವಹಿಸಿ ನಾಯಿಗಳನ್ನು ಸಾಕುವ ಮಾಲೀಕರಿಗೆ ಎಚ್ಚರಿಕೆ ಮತ್ತು ಕೆಲವು ನಿಭಂದನೆಗಳನ್ನು ಹಾಕುವುದು ಅವಶ್ಯವಾಗಿದೆ.
ಹೀಗೊಂದಿಷ್ಟು ಸಲಹೆಗಳು
l ನಾಯಿಗಳನ್ನು ಸಾಕುವ ಮಾಲೀಕರು ಕಡ್ಡಾಯವಾಗಿ ಮಹಾನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಸಿ 5000 ರೂಪಾಯಿ ವಾರ್ಷಿಕವಾಗಿ ಪಾವತಿಸುವುದು.
l ಸಾಕು ನಾಯಿಗಳಿಗೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅದರ ಕತ್ತಿಗೆ ಎಲ್ಲರಿಗೂ ಕಾಣುವಂತೆ ನೇತು ಹಾಕಿರಬೇಕು. ಅದರಲ್ಲಿ ನಾಯಿಯ ನೋಂದಣಿ ಸಂಖ್ಯೆ, ಹಣ ಪಾವತಿಸಿರುವುದಕ್ಕೆ ದಾಖಲೆ, ಮಾಲೀಕರ ಹೆಸರು, ವಿಳಾಸ ನಮೂದಿಸಿರಬೇಕು.
l ಸಾಕು ನಾಯಿಗಳಿಗೆ ಕಡ್ಡಾಯವಾಗಿ ಮಾಲೀಕರೇ ಅವರ ಮನೆಯಲ್ಲಿ ಅಥವಾ ಅವರ ಸ್ವತ್ತಿನಲ್ಲಿ ಮಲ-ಮೂತ್ರ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕು.
l ಸಾರ್ವಜನಿಕರ ಸ್ಥಳ, ಪಾರ್ಕ್ ಸುತ್ತ-ಮುತ್ತ, ಚರಂಡಿ ಸುತ್ತ ಮುತ್ತ ಅಥವಾ ಮತ್ತೊಬ್ಬರ ಮನೆ ಬಳಿ ಸಾಕು ನಾಯಿಗಳು ಮಲ-ಮೂತ್ರ ವಿಸರ್ಜನೆ ಮಾಡಿದ್ದನ್ನು ಯಾರೇ ಗಮನಿಸಿ ದೂರು ನೀಡಿದರೆ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕನಿಷ್ಠ 2000 ರೂಪಾಯಿ ದಂಡ ವಿಧಿಸಬೇಕು.
ಗುಂಜೂರು ಮಂಜುನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.