ADVERTISEMENT

Bengaluru University: ಚಿನ್ನ ಗೆದ್ದ ಬೀದಿ ಬದಿ ವ್ಯಾಪಾರಿ ಮಗಳು, ಆಟೊ ಚಾಲಕ ಮಗ

ಬಡತನ ಮೀರಿ ಬೆಳಗಿದ ಪ್ರತಿಭೆಗಳು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 0:30 IST
Last Updated 9 ಅಕ್ಟೋಬರ್ 2025, 0:30 IST
ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಹೇಮಂತ್ ಎ.ಎಸ್., ವಿದ್ಯಾಶ್ರೀ ಬಿ.ಎಸ್., ಪ್ರೇಮಾ ಎಸ್., ರುಫಿಯಾ ಕೆ.ಎಂ. ಪರಸ್ಪರ ಅಭಿನಂದಿಸಿ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಹೇಮಂತ್ ಎ.ಎಸ್., ವಿದ್ಯಾಶ್ರೀ ಬಿ.ಎಸ್., ಪ್ರೇಮಾ ಎಸ್., ರುಫಿಯಾ ಕೆ.ಎಂ. ಪರಸ್ಪರ ಅಭಿನಂದಿಸಿ ಸಂಭ್ರಮಿಸಿದರು ಪ್ರಜಾವಾಣಿ ಚಿತ್ರ   
ಚಿನ್ನದ ಪದಕ ಪಡೆದ ಬೀದಿ ಬದಿ ವ್ಯಾಪಾರಿ ಮಗಳು, ಆಟೊ ಡ್ರೈವರ್‌ ಮಗ, ರೈತನ ಮಗಳು

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬೀದಿಬದಿ ವ್ಯಾಪಾರಿಯ ಮಗಳು 11 ಚಿನ್ನದ ಪದಕ, ಆಟೊ ಚಾಲಕನ ಮಗ ಹಾಗೂ ರೈತನ ಮಗಳು ತಲಾ ಏಳು ಚಿನ್ನದ ಪದಕ ಪಡೆದು ಪ್ರತಿಭೆಗೆ ಬಡತನದ ಹಂಗಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ಎಂ.ಎ. ಕನ್ನಡ ವಿಭಾಗದಲ್ಲಿ ಪ್ರೇಮಾ ಎಸ್‌. 11 ಚಿನ್ನದ ಪದಕಗಳನ್ನು ಪಡೆದರು. ಅವರ ತಂದೆ ಜಾಲಹಳ್ಳಿ ಕ್ರಾಸ್‌ ನಿವಾಸಿ ಶರಣಪ್ಪ ಮುದಿಯಪ್ಪ ಮುಕ್ಕಣ್ಣವರ್‌ ಬೀದಿಬದಿ ವ್ಯಾಪಾರಿ. ತಾಯಿ ಸಾವಿತ್ರಿ ಅವರು ಬೇರೆಯವರ ಮನೆಯಲ್ಲಿ ಚಪಾತಿ ತಯಾರಿಸಿ ಹೋಟೆಲ್‌ಗಳಿಗೆ ನೀಡುವ ಕೆಲಸ ಮಾಡುತ್ತಾರೆ.

‘ಬಿ.ಇಡಿ ಮಾಡ್ತಾ ಇದ್ದೇನೆ. ಪಿಎಚ್‌.ಡಿ. ಮಾಡಬೇಕು. ಸಹಾಯಕ ಪ್ರಾಧ್ಯಾಪಕಿ ಆಗಬೇಕು’ ಎಂದು ಪ್ರೇಮಾ ತನ್ನ ಕನಸುಗಳನ್ನು ಹಂಚಿಕೊಂಡರು. ‘ನಾವಂತೂ ಓದಿಲ್ಲ. ಮಗಳು ಪ್ರೇಮಾ, ಮಗ ಪ್ರಶಾಂತ್‌ ಆದರೂ ಓದಲಿ’ ಎಂದು ಹೆತ್ತವರು ಅಭಿಮಾನದಿಂದ ಹೇಳಿಕೊಂಡರು.

ADVERTISEMENT

ಎಂ.ಎಸ್‌ಸಿ ರಸಾಯನ ವಿಜ್ಞಾನ ವಿಭಾಗದಲ್ಲಿ ವಿದ್ಯಾಶ್ರೀ ಬಿ.ಎಸ್‌. ಏಳು ಪದಕಗಳನ್ನು ಪಡೆದಿದ್ದಾರೆ. ಇವರ ತಂದೆ ಸೋಮಶೇಖರ್‌ ಎ. ಮತ್ತು ತಾಯಿ ರೂಪಾ ದೇವಿ ಕೋಲಾರ ಜಿಲ್ಲೆಯ ಬೆಳಮಾರನಹಳ್ಳಿಯಲ್ಲಿ ಕೃಷಿಕರಾಗಿದ್ದಾರೆ. 

‘ಪಿಎಚ್‌.ಡಿ ಮಾಡಬೇಕು. ಪ್ರಾಧ್ಯಾಪಕಿಯಾಗಬೇಕು’ ಎಂದು ಮಗಳು ಕನಸು ಇಟ್ಟುಕೊಂಡಿದ್ದರೆ, ಇಷ್ಟು ಓದಿಸಿದ್ದೇ ಕಷ್ಟದಲ್ಲಿ, ಇನ್ನು ಎಲ್ಲಿಯಾದರೂ ಉದ್ಯೋಗ ಹುಡುಕಬೇಕು’ ಎಂದು ಹೆತ್ತವರು ಹೇಳಿಕೊಂಡರು.

ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ  ಹೇಮಂತ್‌ ಎ.ಎಸ್‌. ಏಳು ಚಿನ್ನದ ಪದಕ ಪಡೆದಿದ್ದಾರೆ. ಇವರು ಶಿವಮೊಗ್ಗದ ಅಬ್ಬಲಗೆರೆ ಗ್ರಾಮದ ಕಲ್ಲಗಂಗೂರು ನಿವಾಸಿ ಶಿವಕುಮಾರ್‌–ಭಾಗ್ಯಲಕ್ಷ್ಮೀ ದಂಪತಿಯ ಮಗ. ಶಿವಕಮಾರ್‌ ಆಟೊ ಚಾಲಕರಾಗಿ ದುಡಿದು ಕುಟುಂಬವನ್ನು ಸಾಕುತ್ತಿದ್ದಾರೆ. ಭಾಗ್ಯಲಕ್ಷ್ಮೀ ಗೃಹಿಣಿ.

‘ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಶೋಭಾ ಲಿಮಿಟೆಡ್‌ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಮಂತ್‌ ತಿಳಿಸಿದರು.

ಏಳು ಪದಕಗಳನ್ನು ಪಡೆದವರಲ್ಲಿ ರುಫಿಯಾ ಕೆ.ಎಂ. ಕೂಡ ಒಬ್ಬರು. ಅವರು ಎಂ.ಎಸ್‌ಸಿ ಭೌತವಿಜ್ಞಾನದಲ್ಲಿ ಈ ಸಾಧನೆ ಮಾಡಿದ್ದಾರೆ. ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಸಂಚಾರ ನಿಯಂತ್ರಣಾಧಿಕಾರಿ. ತಾಯಿ ನಹೀದಾ ನುಜ್ರತ್‌ ಗೃಹಿಣಿಯಾಗಿದ್ದಾರೆ. ಚಿಂತಾಮಣಿಯ ರುಫಿಯಾ ‘ಪಿಎಚ್‌.ಡಿ ಮಾಡಬೇಕು. ಪ್ರಾಧ್ಯಾಪಕಿಯಾಗಬೇಕು’ ಎಂಬ ಗುರಿ ಇಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.