ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮರಣಪತ್ರ ಬರೆದಿಟ್ಟು ಏಳನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ಮೂರನೇ ಹಂತದ ಬನಗಿರಿ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು 14 ವರ್ಷದ ಗಂಧಾರ್ ಜಿ. ಪ್ರಸಾದ್ ಎಂದು ಗುರುತಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೋಮವಾರ ಬೆಳಿಗ್ಗೆ ಬಾಲಕನ ಸಹೋದರ ಕೊಠಡಿಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದೆ. ಸ್ಥಳದಲ್ಲಿ ದೊರೆತ ಮರಣಪತ್ರ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ವಿದ್ಯಾರ್ಥಿಯ ತಂದೆ ಗಣೇಶ್ ಪ್ರಸಾದ್ ಸಂಗೀತ ಕಲಾವಿದ, ತಾಯಿ ಸವಿತಾ ಜನಪದ ಗಾಯಕಿ. ಇವರ ಮತ್ತೊಬ್ಬ ಮಗ 21 ವರ್ಷದ ಜಿ.ಬಸಂತ್ ಬಸವೇಶ್ವರ ನಗರದ ಸ್ಟೀಫನ್ ಸ್ಕೂಲ್ ಫಿಲ್ಮ್ ಮ್ಯೂಸಿಕ್ ಕಾಲೇಜಿನಲ್ಲಿ ಬಿ.ಡಿ.ಎಫ್.ಎಂ ಓದುತ್ತಿದ್ದಾರೆ. ಮಂಗಳೂರಿನ ಕದ್ರಿ ಮೂಲದ ಕುಟುಂಬವು ಬನಗಿರಿ ನಗರದಲ್ಲಿ ನೆಲಸಿದೆ.
‘ರಾತ್ರಿ ಎಂದಿನಂತೆ ಊಟ ಮಾಡಿ ಮಗ ಮಲಗಿದ್ದ. ಬೆಳಿಗ್ಗೆ ಎಷ್ಟು ಹೊತ್ತಾದರೂ ರೂಮ್‌ನಿಂದ ಹೊರಗೆ ಬಂದಿರಲಿಲ್ಲ. ಶಾಲೆಗೆ ಕಳುಹಿಸುವ ಸಲುವಾಗಿ ಆತನನ್ನು ಎಬ್ಬಿಸಲು ಬಸಂತ್ ಹೋಗಿ ನೋಡಿದಾಗ, ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಯಾವುದೋ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು. ಮಗನ ಸಾವಿನ ಬಗ್ಗೆ ಯಾವುದೇ ರೀತಿಯ ಅನುಮಾನವಿಲ್ಲ’ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಮರಣಪತ್ರದಲ್ಲಿ ಏನಿದೆ?: ‘ಪ್ರೀತಿಯ ಕುಟುಂಬದ ಸದಸ್ಯರೇ...ನನ್ನನ್ನು ಕ್ಷಮಿಸಿ. ಈ ಪತ್ರವನ್ನು ಓದಿದವರು ದುಃಖಿಸಬೇಡಿ. ಈಗಾಗಲೇ ನಾನು ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿಯೂ ಅರ್ಥೈಸಿಕೊಳ್ಳಬೇಡಿ. ನಿಮಗೆ ನೋವಾಗುತ್ತದೆ ಅನ್ನುವುದು ತಿಳಿದಿದೆ. ಈ ಮನೆ ಚೆನ್ನಾಗಿರಬೇಕೆಂದು ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಕೊಠಡಿಯಲ್ಲಿ ಲಭಿಸಿದ ಮರಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಕೋಪ ಬರುವಂತೆ ನಡೆದುಕೊಂಡಿದ್ದೇನೆ. ನಿಮಗೆ ತೊಂದರೆ ಸಹ ನೀಡಿದ್ದೇನೆ. ಆದರೆ, ನನ್ನ ಉದ್ದೇಶ ನಿಮ್ಮನ್ನು ನೋಯಿಸುವುದು ಆಗಿರಲಿಲ್ಲ’ ಎಂದು ವಿವರಿಸಲಾಗಿದೆ.
‘ಕೋಪವಿದ್ದರೆ ಕ್ಷಮೆ ಕೇಳುತ್ತೇನೆ. ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ. 14 ವರ್ಷ ಬದುಕಿದ್ದು, ಅದರಲ್ಲೇ ತೃಪ್ತನಾಗಿದ್ದೇನೆ. ಸಂತೋಷದಿಂದ ಕಳೆದಿದ್ದೇನೆ. ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿರುತ್ತೇನೆ. ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೂ ತಿಳಿಸಿ. ಶಾಲಾ ಸ್ನೇಹಿತರಿಗೂ ಈ ಮಾತನ್ನು ಹೇಳಿ. ಐ ಮಿಸ್ ಯೂ ಆಲ್ – ಗುಡ್ಬೈ ಅಮ್ಮ’ ಎಂದು ಮರಣಪತ್ರದಲ್ಲಿ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಕೊಠಡಿಯಲ್ಲಿ ದೊರೆತ ಮರಣಪತ್ರವನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ತಾಯಿ ಕಳೆದ ಶುಕ್ರವಾರ ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದು, ವಿಷಯ ತಿಳಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.