ADVERTISEMENT

ಆರ್‌.ಟಿ.ನಗರಕ್ಕೆ ಉಪನೋಂದಣಾಧಿಕಾರಿ ಕಚೇರಿ: ಆರ್‌. ಅಶೋಕ

ಕಂದಾಯ ಸಚಿವ ಅಶೋಕ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 19:32 IST
Last Updated 27 ಸೆಪ್ಟೆಂಬರ್ 2021, 19:32 IST
ಆರ್‌. ಅಶೋಕ
ಆರ್‌. ಅಶೋಕ    

ಬೆಂಗಳೂರು: ಚೋಳನಾಯಕನಹಳ್ಳಿಯಲ್ಲಿನ ಹೆಬ್ಬಾಳ ಉಪನೋಂದಣಾಧಿಕಾರಿ ಕಚೇರಿಯನ್ನು ಮುಂದಿನ ದಿನಗಳಲ್ಲಿ ಆರ್‌.ಟಿ.ನಗರಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.

ಸಬ್‌ ರಿಜಿಸ್ಟ್ರಾರ್ ಕಚೇರಿಯ ಅವ್ಯವಸ್ಥೆ ಬಗ್ಗೆ ಸೆಪ್ಟೆಂಬರ್‌ 17ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ವಿಧಾನಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್‌ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ‘ಕಚೇರಿ ಸ್ಥಳಾಂತರಕ್ಕೆ 2021ರ ಆಗಸ್ಟ್‌ 24ರಂದು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಚೋಳನಾಯಕನಹಳ್ಳಿಯಲ್ಲಿರುವ ಕಚೇರಿಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಈ ಕಚೇರಿಯು ಮುಖ್ಯ ರಸ್ತೆಯಿಂದ ತುಂಬಾ ಒಳಗೆ ಇದ್ದು, ಕಿರಿದಾದ ರಸ್ತೆಗಳ ಮೂಲಕ ಹಾದು ಹೋಗಬೇಕಾಗಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಎಚ್‌ಎಂಟಿ ಲೇಔಟ್‌ನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಚೋಳನಾಯನಹಳ್ಳಿಯ ಬಾಡಿಗೆ ಕಟ್ಟಡವೊಂದರಲ್ಲಿ ಈ ಕಚೇರಿ ಇದೆ. ಆಸ್ತಿ ನೋಂದಣಿ, ವಿವಾಹ ನೋಂದಣಿಗಾಗಿ ನಿತ್ಯ ಈ ಕಚೇರಿಗೆ ನೂರಾರು ಜನರು ಬರುತ್ತಾರೆ. ರಸ್ತೆ ಬದಿಯಲ್ಲಿರುವ ಕಚೇರಿ ಬಳಿ ವಾಹನ ನಿಲುಗಡೆಗೆ ಜಾಗವೇ ಇಲ್ಲ.

ಸರ್ವರ್ ಸಮಸ್ಯೆ ಹಾಗೂ ದಾಖಲೆಗಳ ಸಂಗ್ರಹ ವಿಳಂಬದಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆ ದಿನಗಟ್ಟಲೆ ಹಿಡಿಯುತ್ತದೆ. ಬೆಳಿಗ್ಗೆ ಕಚೇರಿಗೆ ಬಂದರೆ ಆಸ್ತಿ ನೋಂದಣಿ ಕಾರ್ಯ ಮುಗಿಸುವಷ್ಟರಲ್ಲಿ ಸಂಜೆಯೇ ಆಗುತ್ತದೆ. ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ಮೊದಲೇ ಕಿರಿದಾದ ರಸ್ತೆಯಲ್ಲಿ ಬೇರೆ ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಡಕಾಗುತ್ತಿದೆ. ರಸ್ತೆ ಬದಿಯಲ್ಲೂ ಕೆಲವೇ ವಾಹನಗಳ ನಿಲುಗಡೆಗೆ ಅವಕಾಶ ಇರುವುದರಿಂದ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಕಚೇರಿಗೆ ಬರುವ ಜನ ಪರದಾಡಬೇಕಾಗಿದೆ ಎಂಬುದು ಸ್ಥಳೀಯರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.