ADVERTISEMENT

ಮಹತ್ವಾಕಾಂಕ್ಷೆಯ ಉಪನಗರ ರೈಲು ಯೋಜನೆ: ಚುನಾವಣೆಯಲ್ಲಿ ಚರ್ಚೆಗೆ ಬಾರದ ವಿಷಯ

ಶೇ 40 ಸಮಯ ಪೂರ್ಣ; ಶೇ 1ರಷ್ಟು ಕಾಮಗಾರಿ

ವಿಜಯ ಕುಮಾರ್ ಎಸ್‌.ಕೆ.
Published 8 ಏಪ್ರಿಲ್ 2023, 3:02 IST
Last Updated 8 ಏಪ್ರಿಲ್ 2023, 3:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರೇ ಗಡುವು ನಿಗದಿ ಮಾಡಿದ್ದರೂ ಉಪನಗರ ರೈಲು ಯೋಜನೆಯ ಗಾಲಿ ಒಂದೇ ಒಂದು ಸುತ್ತು ಕೂಡ ಮುಂದಕ್ಕೆ ಸಾಗಿಲ್ಲ. ನಗರದ ಸಂಚಾರ ದಟ್ಟಣೆಗೆ ದೊಡ್ಡ ಪರಿಹಾರ ನೀಡುವ ಈ ಯೋಜನೆಯು ವಿಧಾನಸಭೆ ಚುನಾವಣೆಯಲ್ಲಿ ಚರ್ಚಿತ ವಿಷಯವಾಗದೆ ಮರೆಗೆ ಸರಿದಿದೆ.

ನಗರಕ್ಕೆ ಪ್ರತ್ಯೇಕವಾಗಿ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾವ ಸಿದ್ಧಪಡಿಸಿತ್ತು. 2010ರಲ್ಲಿ ಸಿಸ್ಟುಪ್‌– ಪ್ರಜಾ ಸಂಘಟನೆಗಳ ಒತ್ತಾಸೆಯಿಂದ ಈ ಕೂಗು ತೀವ್ರಗೊಂಡಿತು. 2014ರಲ್ಲಿ ಡಿ.ವಿ.ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದಾಗ ಬಜೆಟ್‌ನಲ್ಲೇ ಈ ಯೋಜನೆಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಕೊನೆಗೂ 2019ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಉಲ್ಲೇಖಿಸಲಾಯಿತು. 2020ರ ಅಕ್ಟೋಬರ್‌ 21ರಂದು ರೈಲ್ವೆ ಮಂಡಳಿಯಿಂದ ಇದಕ್ಕೆ ಅನುಮೋದನೆಯೂ ದೊರೆಯಿತು.

ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ( ಕೆ–ರೈಡ್) ಈ ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳನ್ನಾಗಿ ವಿಂಗಡಿಸಿದೆ. ‌2,190 ದಿನಗಳ (6 ವರ್ಷ) ಕಾಲಮಿತಿ ನಿಗದಿ ಮಾಡಿಕೊಂಡಿದೆ. ಅದರಲ್ಲಿ ಈಗ ಶೇ 40ರಷ್ಟು ದಿನಗಳು ಪೂರ್ಣಗೊಂಡಿವೆ. ಆದರೆ, ಕಾಮಗಾರಿ ಭೌತಿಕವಾಗಿ ಶೇ1ರಷ್ಟು ಮಾತ್ರ ಪ್ರಗತಿ ಕಂಡಿದೆ.

ADVERTISEMENT

ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಮಾರ್ಗದಲ್ಲಿ ಹೆಬ್ಬಾಳ ಬಳಿ ಕಾಮಗಾರಿ ಆರಂಭವಾಗಿದೆ. ಅದನ್ನು ಬಿಟ್ಟರೆ ಬೇರೆಲ್ಲೂ ಕಾಮಗಾರಿ ಆರಂಭವೇ ಆಗಿಲ್ಲ. ಹೀಲಳಿಗೆ–ರಾಜಾನುಕುಂಟೆ, ಸಿಟಿ ರೈಲು ನಿಲ್ದಾಣ–ದೇವನಹಳ್ಳಿ ಮಾರ್ಗಗಳ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆಯಬೇಕಿದ್ದು, ಸಿದ್ಧತೆ ಆರಂಭವಾಗಿದೆ. ಕೆಂಗೇರಿ–ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸಿದ್ಧತೆಯೂ ಆಗಿಲ್ಲ. ಇನ್ನು ಕಾಮಗಾರಿ ಆರಂಭವಾಗುವುದು ಯಾವಾಗ ಎಂದು ರೈಲ್ವೆ ಹೋರಾಟಗಾರರು ಪ್ರಶ್ನಿಸಿತ್ತಾರೆ.

2022ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿ 40 ತಿಂಗಳ ಗಡುವು ನಿಗದಿ ಮಾಡಿದ್ದರು. ಅದಾಗಿ 10 ತಿಂಗಳು ಪೂರ್ಣಗೊಂಡಿದೆ. ಅಂದರೆ ಗಡುವಿನಲ್ಲಿ ಶೇ 25ರಷ್ಟು ಸಮಯ ಮುಗಿದಿದೆ.‌

ಈ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಪಾತ್ರ ದೊಡ್ಡದಿದೆ. ಕಾಮಗಾರಿ ನಿರ್ವಹಿಸುತ್ತಿರುವ ಕೆ–ರೈಡ್‌, ಸರ್ಕಾರದ ಹಿಡಿತದಲ್ಲಿರುವ ಸಂಸ್ಥೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧೀನದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಕಾಮಗಾರಿಗೆ ಸಂಬಂಧಿಸಿದ ಒಪ್ಪಿಗೆಗಳನ್ನು ತ್ವರಿತವಾಗಿ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಸದೆ ಇರುವುದರಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

‘ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣ’

ಕೆ–ರೈಡ್‌ ಕಾರ್ಯ ನಿರ್ವಹಣೆಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಹಕಾರ ನೀಡಿದ್ದರೆ ವಿಳಂಬ ಆಗುತ್ತಿರಲಿಲ್ಲ. ಆಗಿರುವ ವಿಳಂಬಕ್ಕೆ ಜನಪ್ರತಿನಿಧಿಗಳೇ ಹೊಣೆಗಾರರು. ಯೋಜನೆ ಅನುಷ್ಠಾನಕ್ಕೆ ಸಂಸದರು ಅಧಿಕಾರಿಗಳ ಬೆನ್ನು ಹತ್ತಬೇಕು. ಚುನಾವಣೆ ಎದುರಾಗುತ್ತಿದೆ ಎಂಬ ಕಾರಣಕ್ಕಾದರೂ ಕಾಮಗಾರಿಗೆ ವೇಗ ನೀಡುತ್ತಿಲ್ಲ. ಅಷ್ಟೊಂದು ದಪ್ಪ ಚರ್ಮವನ್ನು ಜನಪ್ರತಿನಿಧಿಗಳು ಹೊಂದಿದ್ದಾರೆ. ಸ್ವತಃ ಪ್ರಧಾನಿಯೇ ಭರವಸೆ ನೀಡಿದ ನಂತರ ಯುದ್ಧೋಪಾದಿಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಭಾವಿಸಿದ್ದೆವು. ಆದರೆ, ಕಾಮಗಾರಿಯ ಸ್ಥಿತಿ ನೋಡಿದರೆ ನಾಚಿಕೆಯಾಗುತ್ತದೆ. ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿ 10 ತಿಂಗಳಾದರೂ ಕೆಲಸ ಮಾತ್ರ ಒಂದು ಹೆಜ್ಜೆಯಷ್ಟೂ ಮುಂದಕ್ಕೆ ಹೋಗಿಲ್ಲ. ಮೋದಿ ಅವರು ಹೇಳಿದ ಬಳಿಕವಾದರೂ ಸ್ಥಳೀಯ ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು.

-ರಾಜಕುಮಾರ್ ದುಗಾರ್, ಸಿಟಿಜನ್ ಫಾರ್ ಸಿಟಿಜನ್ ಸಂಘಟನೆ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.