ADVERTISEMENT

ದಿಢೀರ್ ಲಾಕ್‌ಡೌನ್‌: ವರ್ತಕರು ಕಕ್ಕಾಬಿಕ್ಕಿ

ಅಗತ್ಯ ಸೇವೆ ಹೊರತು ಪಡಿಸಿ ಎಲ್ಲ ವಾಣಿಜ್ಯ ಮಳಿಗೆಗಳು ಬಂದ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 22:20 IST
Last Updated 22 ಏಪ್ರಿಲ್ 2021, 22:20 IST
ನಗರದ ಚಿಕ್ಕಪೇಟೆಯ ಮುಚ್ಚಿದ ವಾಣಿಜ್ಯ ಮಳಿಗೆಯ ಮುಂದೆ ಕುಳಿತಿದ್ದ ಮಹಿಳೆಯರು –ಪ್ರಜಾವಾಣಿ ಚಿತ್ರ 
ನಗರದ ಚಿಕ್ಕಪೇಟೆಯ ಮುಚ್ಚಿದ ವಾಣಿಜ್ಯ ಮಳಿಗೆಯ ಮುಂದೆ ಕುಳಿತಿದ್ದ ಮಹಿಳೆಯರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದಲ್ಲಿ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿ ಮುಂಗಟ್ಟು ಹಾಗೂ ವಾಣಿಜ್ಯ ಮಳಿಗೆಗಳನ್ನು ಪೊಲೀಸರು ಶುಕ್ರವಾರ ಸಂಜೆ ದಿಢೀರನೇ ಮುಚ್ಚಿಸಿದ್ದರಿಂದ ವರ್ತಕರು ಕಕ್ಕಾಬಿಕ್ಕಿಯಾದರು.

ಯಾವುದೇ ಮುನ್ಸೂಚನೆ ಇಲ್ಲದೆ ಹೀಗೆ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದ್ದಕ್ಕೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.

‘ಪೊಲೀಸರು ದಿಢೀರನೇ ಬಂದು ಒತ್ತಾಯಪೂರ್ವಕವಾಗಿ ಬಾಗಿಲುಗಳನ್ನು ಮುಚ್ಚಿಸಿದ್ದಾರೆ. ಅಂಗಡಿಗಳಲ್ಲಿ ಹೆಚ್ಚು ಜನ ಇದ್ದಾರೆ, ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎಂದು ಅಂಗಡಿಗಳನ್ನು ಮುಚ್ಚಿಸಿದರು’ ಎಂದು ಕಲಾಸಿಪಾಳ್ಯದ ವರ್ತಕ ರವಿರಾಜ್ ದೂರಿದರು.

ADVERTISEMENT

‘ಶನಿವಾರ, ಭಾನುವಾರ ಮಾತ್ರ ಸಂಪೂರ್ಣ ಬಂದ್ ಎಂದು ಹೇಳಿದ್ದರು. ಅಲ್ಲದೆ, ಬುಧವಾರ ಸಂಜೆ ಪೊಲೀಸರಿಗೆ ಕರೆ ಮಾಡಿ ಲಾಕ್‌ಡೌನ್‌ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅಂಗಡಿ ತೆಗೆದಿದ್ದೆವು. ನಮ್ಮನ್ನು ವಿಶ್ವಾಸಕ್ಕೂ ತೆಗೆದುಕೊಳ್ಳದೆ ಸರ್ಕಾರ ಈ ರೀತಿ ನಡೆದುಕೊಂಡಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಉತ್ಪನ್ನಗಳ ಅವಧಿ ಮುಕ್ತಾಯ:

‘ಆಹಾರ ಪದಾರ್ಥಗಳು, ಸಿಹಿ ತಿಂಡಿ, ಚಾಕಲೇಟ್‌ ಅಥವಾ ಕಾಸ್ಮೆಟಿಕ್ಸ್‌ನಂತಹ ಉತ್ಪನ್ನಗಳನ್ನು ನಿಗದಿತ ಅವಧಿಯೊಳಗೆ ಬಳಸಬೇಕು. ಇಲ್ಲದಿದ್ದರೆ ಹಾಳಾಗುತ್ತವೆ. ಹೀಗೆ ಅಂಗಡಿಗಳನ್ನು ಬಂದ್‌ ಮಾಡಿಸುವುದಾಗಿ ಸರ್ಕಾರ ಮುಂಚಿತವಾಗಿಯೇ ಹೇಳಿದ್ದರೆ ಈ ಉತ್ಪನ್ನಗಳನ್ನು ನಾವು ತರಿಸುತ್ತಲೇ ಇರಲಿಲ್ಲ’ ಎಂದು ಚಿಕ್ಕಪೇಟೆಯ ವರ್ತಕ ಕೃಷ್ಣಮೂರ್ತಿ ಹೇಳಿದರು.

‘ಕಳೆದ ಬಾರಿ ಲಾಕ್‌ಡೌನ್‌ ಘೋಷಿಸಿದಾಗ ಬಂದ್‌ ಆಗಿದ್ದ ಅಂಗಡಿಗಳ ಪೈಕಿ ಶೇ 30 ಅಂಗಡಿ–ಮುಂಗಟ್ಟುಗಳು ಮತ್ತೆ ತೆರೆಯಲೇ ಇಲ್ಲ. ಈಗ ಈ ರೀತಿ ಇದ್ದಕ್ಕಿದ್ದಂತೆ ಅಂಗಡಿಗಳನ್ನು ಮುಚ್ಚಿಸಿದರೆ ವರ್ತಕರು ಶಾಶ್ವತವಾಗಿ ಉದ್ಯಮದಿಂದ ದೂರ ಉಳಿಯಬೇಕಾದ ಸ್ಥಿತಿ ಬರುತ್ತದೆ’ ಎಂದು ಹೇಳಿದರು.

ಸಮಯದಲ್ಲಿ ರಿಯಾಯಿತಿ ನೀಡಿ

‘ಕೋವಿಡ್‌ ಮಾರ್ಗಸೂಚಿಗಳನ್ನು ಇನ್ನೂ ಕಟ್ಟುನಿಟ್ಟಾಗಿ ನಾವು ಪಾಲಿಸುತ್ತೇವೆ. ಲಾಕ್‌ಡೌನ್‌ ಬದಲು ವ್ಯಾಪಾರ–ವಹಿವಾಟಿನ ಅವಧಿಯನ್ನು ಬೇಕಾದರೆ ಕಡಿತಗೊಳಿಸಲಿ. ಕರ್ಫ್ಯೂ ಘೋಷಿಸಿದ್ದ ಅವಧಿಯ ಪೈಕಿ ಒಂದೆರಡು ಗಂಟೆಗಳನ್ನು ಹೆಚ್ಚು ಮಾಡಲಿ. ಆದರೆ, ಕೆಲವು ಗಂಟೆಗಳಷ್ಟಾದರೂ ವ್ಯಾಪಾರ–ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಬೇಕು’ ಎಂದು ಚಿಕ್ಕಪೇಟೆಯ ಶ್ರೀಧರ್‌ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.