ADVERTISEMENT

ಭಯ ಸೃಷ್ಟಿಸಲು ಸುಹಾಸ್ ಶೆಟ್ಟಿ ಹತ್ಯೆ: 11 ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ

11 ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಿದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 15:44 IST
Last Updated 31 ಅಕ್ಟೋಬರ್ 2025, 15:44 IST
<div class="paragraphs"><p>ಎನ್‌ಐಎ </p></div>

ಎನ್‌ಐಎ

   

ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಸಂಬಂಧ 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ  ದೋಷಾರೋಪ ಪಟ್ಟಿ ಸಲ್ಲಿಸಿರುವ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ಹತ್ಯೆ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿ ಅವರನ್ನು ಹತ್ಯೆ ಮಾಡಲಾಗಿತ್ತು. 

ADVERTISEMENT

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಶಸ್ತ್ರಾಸ್ತ್ರ ಕಾಯ್ದೆ 1959 ರ ವಿವಿಧ ಸೆಕ್ಷನ್‌ಗಳ ಅಡಿ ಮಂಗಳೂರಿನ ಅಬ್ದುಲ್ ಸಫ್ವಾನ್ ಅಲಿಯಾಸ್ ಕವಲೂರು ಸಫ್ವಾನ್, ನಿಯಾಜ್ ಅಲಿಯಾಸ್ ನಿಯಾ, ಮೊಹಮ್ಮದ್ ಮುಸಾಮೀರ್, ನೌಷಾದ್, ಆದಿಲ್ ಮಹರೂಫ್, ಅಜರುದ್ದೀನ್, ಅಬ್ದುಲ್ ಖಾದರ್, ಖಲಂದರ್ ಶಫಿ, ಎಂ.ನಾಗರಾಜ್, ರಂಜಿತ್ ಮತ್ತು ಮೊಹಮ್ಮದ್ ರಿಜ್ವಾನ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳು ಹಲವು ತಿಂಗಳು ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ, ವ್ಯವಸ್ಥಿತ ಸಂಚು ರೂಪಿಸಿದ್ದರು. ಸುಹಾಸ್ ಶೆಟ್ಟಿ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಏಳು ಮಂದಿಯ ತಂಡ ಎರಡು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದರು. ತಪ್ಪಿಸಿಕೊಳ್ಳದಂತೆ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿದ್ದರು. ಕಾರಿನಿಂದ ಕೆಳಗಿಳಿದು ಓಡಲು ಯತ್ನಿಸಿದ್ದ ಸುಹಾಸ್‌ನ‌ನ್ನು ಆರೋಪಿಗಳು ಬೆನ್ನಟ್ಟಿ, ಹತ್ಯೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ಆರೋಪಿ ಆದಿಲ್ ಮಹರೂಫ್ ಹಂತಕರಿಗೆ ಹಣಕಾಸು ನೆರವು ನೀಡಿದ್ದ. ಬಂಧಿತರ ಪೈಕಿ ಅಬ್ದುಲ್ ಸಫ್ವಾನ್ ಸೇರಿದಂತೆ ಬಹುತೇಕರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‍ಡಿ) ಸಂಘಟನೆಯ ಮಾಜಿ ಸದಸ್ಯರು. ಬಂಧಿತ ಮತ್ತೊಬ್ಬ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ, ಕೇಂದ್ರ ಗೃಹ ಸಚಿವಾಲಯವು ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವರ್ಗಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.