ADVERTISEMENT

ಸುಹಾಸ್ ಶೆಟ್ಟಿ ಹತ್ಯೆ: ಎನ್‌ಐಎ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:47 IST
Last Updated 7 ಮೇ 2025, 14:47 IST
<div class="paragraphs"><p>ಸುಹಾಸ್ ಶೆಟ್ಟಿ</p></div>

ಸುಹಾಸ್ ಶೆಟ್ಟಿ

   

ಬೆಂಗಳೂರು: ‘ಹಿಂದುತ್ವವಾದಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು. ಹಿಂದುತ್ವವಾದಿ ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸರ್ಕಾರಕ್ಕೆ ಆಗ್ರಹಿಸಿದೆ. 

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ಸಹ ಕಾರ್ಯದರ್ಶಿ ಬಿ. ಸುರೇಶ್, ‘ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಮೃತಪಟ್ಟರೆ ಗೃಹ ಸಚಿವರು ಸೇರಿ ಸರ್ಕಾರದ ಪ್ರತಿನಿಧಿಗಳು ಅವರ ಮನೆಗಳಿಗೆ ಭೇಟಿ ನೀಡುತ್ತಾರೆ. ಆದರೆ, ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾದಾಗ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುವ ಸೌಜನ್ಯ ತೋರುತ್ತಿಲ್ಲ. ಈ ಸರ್ಕಾರದಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣವನ್ನು ಎನ್‌ಐಎಗೆ ನೀಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ADVERTISEMENT

‘ವ್ಯವಸ್ಥಿತ ಸಂಚು ರೂಪಿಸಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ. ಈ ಕೊಲೆ ಹಿಂದೆ ನಿಷೇಧಿತ ಉಗ್ರ ಸಂಘಟನೆ ಕೈವಾಡ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಈ ಹಿಂದೆ ಪಿಎಫ್ಐ ಕಾರ್ಯಕರ್ತರು ನಡೆಸಿರುವ ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಗೂ, ಸುಹಾಸ್ ಶೆಟ್ಟಿ ಹತ್ಯೆಗೂ ಬಹಳಷ್ಟು ಸಾಮ್ಯತೆ ಇದೆ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದುತ್ವವಾದಿ ಕಾರ್ಯಕರ್ತರಾದ ಶರಣ್ ಪಂಪ್‌ವೆಲ್, ಭರತ್ ಕುಂಡೆಲ್ ಮೊದಲಾದವರಿಗೆ ಸ್ವಯಂ ರಕ್ಷಣಗೆ ಗನ್ ಪರವಾನಗಿಯನ್ನೂ ನೀಡುತ್ತಿಲ್ಲ, ರಕ್ಷಣೆಯನ್ನೂ ಒದಗಿಸುತ್ತಿಲ್ಲ’ ಎಂದು ದೂರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.