ADVERTISEMENT

ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ‘ಮಡಕೆ ನೀರು’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 14:42 IST
Last Updated 14 ಏಪ್ರಿಲ್ 2024, 14:42 IST
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಣ್ಣಿನ ಮಡಕೆಯಲ್ಲಿ ಇಟ್ಟಿರುವ ನೀರು ಕುಡಿಯುತ್ತಿರುವ ಪ್ರಯಾಣಿಕರು
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಣ್ಣಿನ ಮಡಕೆಯಲ್ಲಿ ಇಟ್ಟಿರುವ ನೀರು ಕುಡಿಯುತ್ತಿರುವ ಪ್ರಯಾಣಿಕರು   

ಬೆಂಗಳೂರು: ರೈಲು ಪ್ರಯಾಣಿಕರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆಯಾಗಬಾರದು ಎಂಬ ಕಾರಣಕ್ಕೆ ನೈರುತ್ಯ ರೈಲ್ವೆಯು ರೈಲು ನಿಲ್ದಾಣಗಳಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಇಡುವ ವ್ಯವಸ್ಥೆ ಮಾಡಿದೆ.

ಇಲ್ಲಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಲ್ಲಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಇಡಲಾಗಿದೆ. ಮಣ್ಣಿನ ಮಡಕೆಯಲ್ಲಿ ನೀರು ತಂಪಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲ ಎಲ್ಲ ನಿಲ್ದಾಣಗಳಲ್ಲಿ ಮತ್ತು ಕೆಲವೇ ನಿಮಿಷ ನಿಲುಗಡೆ ಇರುವ ನಿಲ್ದಾಣಗಳಲ್ಲಿಯೂ ಮಡಕೆಯಲ್ಲಿ ಕುಡಿಯುವ ನೀರನ್ನು ಇಡಲಾಗಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಈಗಾಲೇ ಅಸ್ತಿತ್ವದಲ್ಲಿ ಇರುವ ಎಲ್ಲ ವಾಟರ್‌ ಕೂಲರ್‌ಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತಿದೆ. ಪ್ರಮುಖ ನಿಲ್ದಾಣಗಳಲ್ಲಿ ಅಗತ್ಯ ಬಿದ್ದರೆ ನೀರು ಪೂರೈಸಲು ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳು, ಸ್ಕೌಟ್ಸ್‌, ಗೈಡ್ಸ್‌, ಸ್ವಸಹಾಯ ಗುಂಪುಗಳ ಸಹಯೋಗ ಪಡೆದು ಸಾಮಾನ್ಯ ಕೋಚ್‌ಗಳ ಬಳಿ ತಂಪಾದ ನೀರು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ನಿಯಮಿತವಾಗಿ ನೀರಿನ ಲಭ್ಯತೆಯ ಪರಿಶೀಲನೆ ನಡೆಯಲಿದೆ.

ADVERTISEMENT

ನಿಲ್ದಾಣಗಳಲ್ಲಿನ ಎಲ್ಲ ಅಡುಗೆ ಘಟಕಗಳಲ್ಲಿ (ಪ್ಯಾಂಟ್ರಿ) ರೈಲು ಬದಿ ಮಾರಾಟ ಮಾಡುವ ಸಂಚಾರ ಘಟಕಗಳಲ್ಲಿಯೂ ಸಾಕಷ್ಟು ನೀರಿನ ಸಂಗ್ರಹ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಬೇಸಿಗೆಯಲ್ಲಿ ಶುದ್ಧಕುಡಿಯುವ ನೀರು ಒದಗಿಸಲು ನೈರುತ್ಯ ರೈಲ್ವೆ ಬದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.