ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್
ಬೆಂಗಳೂರು: ಸುಂಕೇನಹಳ್ಳಿ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ರೂಪಿಸಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ (ಬಿಸಿಸಿಸಿ) ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು, ಬ್ಲಾಕ್ ಸ್ಪಾಟ್, ಅನಧಿಕೃತ ಕೇಬಲ್ ತೆರವು, ತ್ಯಾಜ್ಯ ನಿರ್ವಹಣೆ ಬಗ್ಗೆ ವ್ಯಾಪಾರಸ್ಥರಲ್ಲಿ ಅರಿವು ಮೂಡಿಸುವುದು, ಪಾದಚಾರಿ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸುವುದು ಸೇರಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಲು ಹೇಳಿದರು.
ಗಾಂಧಿ ಬಜಾರ್ ರಸ್ತೆಯಲ್ಲಿ ವಾರಕ್ಕೊಮ್ಮೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಗೆ ವಾಕಥಾನ್ ಹಾಗೂ ತಿಂಗಳಿಗೊಮ್ಮೆ ವಾಹನಗಳ ಸಂಚಾರ ನಿರ್ಬಂಧಿಸಿ, ಸಾಂಸ್ಕೃತಿಕ ಚಟುವಟಿಕಗಳನ್ನು ಆಯೋಜಿಸಲು ರೂಪುರೇಷೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾರ್ಕಿಂಗ್ ಕಟ್ಟಡ: ಗಾಂಧಿ ಬಜಾರ್‌ನಲ್ಲಿ ‘ಸ್ಮಾರ್ಟ್ ಸಿಟಿ’ ವತಿಯಿಂದ ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಶೀಘ್ರವೇ ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು.
ಆಟೊಗಳಿಗೆ ಆರ್‌ಎಫ್‌ಐಡಿ: ಆಟೊ ಟಿಪ್ಪರ್‌ಗಳಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಡಿಫಿಕೇಷನ್ (ಆರ್‌ಎಫ್‌ಐಡಿ) ಅಳವಡಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆಯ (ಬಿಎನ್‌ಸಿಸಿ) ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ತ್ಯಾಜ್ಯ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಎಚ್‌ಬಿಆರ್ ಲೇಔಟ್‌ನ ಆಟೊ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್ ಮಸ್ಟರಿಂಗ್ ಪಾಯಿಂಟ್‌ಗೆ ಮಂಗಳವಾರ ಭೇಟಿ ನೀಡಿದ ಅವರು, ಒಟ್ಟು 31 ಆಟೊ ಟಿಪ್ಪರ್‌ಗಳಲ್ಲಿ 28 ಮಾತ್ರ ಇದ್ದಿದ್ದನ್ನು ಗಮನಿಸಿದರು. ಐದು ಕಾಂಪ್ಯಾಕ್ಟರ್‌ಗಳಲ್ಲಿ ನಾಲ್ಕು ಮಾತ್ರ ಇದ್ದವು. ಯಾವುದೇ ವಾಹನಗಳಿಗೂ ಆರ್‌ಎಫ್‌ಐಡಿ ಇಲ್ಲದಿರುವುದನ್ನು ಕಂಡು, ಅದರ ಬಗ್ಗೆ ಕ್ರಮ ಕೈಗೊಳ್ಳಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.