ADVERTISEMENT

ಆನೇಕಲ್‌ ಪುರಸಭೆ ಸದಸ್ಯರ ಅನರ್ಹತೆ ಪ್ರಕರಣ: ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 20:13 IST
Last Updated 9 ಜೂನ್ 2022, 20:13 IST
.
.   

ನವದೆಹಲಿ: ಆನೇಕಲ್‌ ಪುರಸಭೆಯ ಮೂವರು ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ನೋಟಿಸ್‌ ನೀಡಿದೆ.

ಹೇಮಲತಾ ಸುರೇಶ್, ಲಲಿತಾ ಲಕ್ಷ್ಮೀನಾರಾಯಣ್‌ ಮತ್ತು ಕೆ.ಶ್ರೀನಿವಾಸ್‌ ಅವರು ಪುರಸಭಾ ಸದಸ್ಯರಾಗಿ 2019ರ ಮೇ 30ರಂದು ಆಯ್ಕೆಯಾಗಿದ್ದರು.ಚುನಾವಣಾ ವೆಚ್ಚದ ದಾಖಲೆ ನೀಡಿಲ್ಲ ಎಂಬ ಕಾರಣಕ್ಕೆಈ ಮೂವರನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ 2021ರ ನವೆಂಬರ್‌ 15ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅನರ್ಹ ಸದಸ್ಯರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಆಯೋಗದ ಆದೇಶವನ್ನು ಹೈಕೋರ್ಟ್‌ 2022ರ ಏಪ್ರಿಲ್‌ 18ರಂದು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ದ್ವಿಸದಸ್ಯರ ಪೀಠದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಪೀಠ ವಜಾ ಮಾಡಿತ್ತು. ಇದೀಗ, ಅನರ್ಹ ಸದಸ್ಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹೊಸ ಸದಸ್ಯರ ಆಯ್ಕೆಗೆ ಜೂನ್‌ 19ರಂದು ಮತದಾನ ನಿಗದಿಯಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದೂ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ADVERTISEMENT

ನ್ಯಾಯಮೂರ್ತಿ ಎಂ.ಆರ್‌. ಷಾ ಹಾಗೂ ಅನಿರುದ್ಧ ಬೋಸ್‌ ಅವರನ್ನು ಒಳಗೊಂಡ ರಜಾ ಕಾಲದ ಪೀಠವು ಗುರುವಾರ ವಿಚಾರಣೆ ನಡೆಸಿ, ಆಯೋಗ ಹಾಗೂ ಇತರರಿಂದ ಪ್ರತಿಕ್ರಿಯೆ ಕೇಳಿದೆ. ಜೂನ್‌ 15ರಂದು ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.

ಅನರ್ಹ ಸದಸ್ಯರ ಪರವಾಗಿ ಹಿರಿಯ ವಕೀಲರಾದ ವಿಭಾ ದತ್ತ ಮಖಿಜಾ ವಾದ ಮಂಡಿಸಿ, ಹೈಕೋರ್ಟ್ ಏಪ್ರಿಲ್‌ 18 ಹಾಗೂ ಮೇ 30ರಂದು ಹೊರಡಿಸಿರುವ ಆದೇಶಗಳ ಸಿಂಧುತ್ವ ಪ್ರಶ್ನಿಸಿದರು. ‘ಚುನಾವಣಾ ಆಯೋಗ ನೋಟಿಸ್‌ ನೀಡಿದ ಎರಡು ದಿನಗಳಲ್ಲೇ ಸದಸ್ಯರು ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ವರದಿಯ ಆಧಾರದಲ್ಲಿ ಚುನಾವಣಾ ಆಯೋಗವು ಸದಸ್ಯರನ್ನು ಅನರ್ಹಗೊಳಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.