ADVERTISEMENT

‘ನಿರ್ದಿಷ್ಟ ದಾಳಿಯೇ ಸಮಸ್ಯೆಗೆ ಪರಿಹಾರವಲ್ಲ’

ಭಾರತ–ಪಾಕಿಸ್ತಾನ: ಅಣ್ವಸ್ತ್ರಗಳ ನೆರಳಿನಲ್ಲಿ ಸೀಮಿತ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 18:30 IST
Last Updated 9 ನವೆಂಬರ್ 2019, 18:30 IST
ಗೋಷ್ಠಿಯಲ್ಲಿ ವರ್ಗೀಸ್‌ ಕೆ ಜಾರ್ಜ್‌(ಬಲಬದಿ) ಮಾತನಾಡಿದರು. ಲೆಫ್ಟಿನೆಂಟ್‌ ಜನರಲ್‌ ಅಟಾ ಹಸ್ನೇನ್‌, ಕ್ರಿಸ್ಟಿನ್‌ ಫೇರ್‌ ಇದ್ದಾರೆ - ---  – ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ವರ್ಗೀಸ್‌ ಕೆ ಜಾರ್ಜ್‌(ಬಲಬದಿ) ಮಾತನಾಡಿದರು. ಲೆಫ್ಟಿನೆಂಟ್‌ ಜನರಲ್‌ ಅಟಾ ಹಸ್ನೇನ್‌, ಕ್ರಿಸ್ಟಿನ್‌ ಫೇರ್‌ ಇದ್ದಾರೆ - ---  – ಪ್ರಜಾವಾಣಿ ಚಿತ್ರ   

ಬೆಂಗಳೂರು:ಭಾರತ–ಪಾಕಿಸ್ತಾನವು ಅಣ್ವಸ್ತ್ರ ರಾಷ್ಟ್ರಗಳಾಗಿರುವುದರಿಂದ ಸಂಘರ್ಷ ಕಡಿಮೆಯಾಗಿದೆಯೇ ? ಅಣ್ವಸ್ತ್ರದ ಹೆಸರಿನಲ್ಲಿ ಭಾವನಾತ್ಮಕ ಸಮರ ನಡೆಯುತ್ತಿದೆಯೇ ? ನಿರ್ದಿಷ್ಟ ದಾಳಿ, ಕಾಶ್ಮೀರ ವಿವಾದದ ನಂತರ ಉಭಯ ದೇಶಗಳ ನಡುವಣ ಸಂಬಂಧ ಎಂಬಂತಹ ಪ್ರಶ್ನೆಗಳ ಕುರಿತು ಸಾಹಿತ್ಯ ಉತ್ಸವದಲ್ಲಿ ಚರ್ಚೆ ನಡೆಯಿತು.

‘ಭಾರತ–ಪಾಕಿಸ್ತಾನ: ಅಣ್ವಸ್ತ್ರಗಳ ನೆರಳಿನಲ್ಲಿ ಸೀಮಿತ ಸಂಘರ್ಷ’ ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್‌ ಜನರಲ್‌ ಅಟಾ ಹಸ್ನೇನ್‌, ‘ಉಭಯ ದೇಶಗಳ ನಡುವೆ ಅಣು ಯುದ್ಧವಾಗುವ ಯಾವುದೇ ಸಾಧ್ಯತೆ ಇಲ್ಲ. ಆದರೆ, ಅಣ್ವಸ್ತ್ರಗಳ ಹೆಸರಿನಲ್ಲಿ ಮನೋವೈಜ್ಞಾನಿಕ ಅಥವಾ ಭಾವನಾತ್ಮಕ ಯುದ್ಧಗಳು ಮಾತ್ರ ನಿರಂತರ ಚಾಲನೆಯಲ್ಲಿರುತ್ತವೆ’ ಎಂದರು.

‘ಅಣ್ವಸ್ತ್ರ ದಾಳಿಯ ಹೇಳಿಕೆಯನ್ನು ತಂತ್ರವಾಗಿ ಇಮ್ರಾನ್‌ ಖಾನ್‌ ಬಳಸಲಾರರು. ಪಾಕಿಸ್ತಾನವೇ ಮೊದಲು ದಾಳಿ ಮಾಡಿದರೂ, ಅದನ್ನು ಎದುರಿಸಿ ಎರಡನೇ ದಾಳಿಯನ್ನು ಸಂಘಟಿಸುವ ಸಾಮರ್ಥ್ಯ ಭಾರತ ಹೊಂದಿದೆ ಎಂಬುದು ಅವರಿಗೆ ಗೊತ್ತಿದೆ’ ಎಂದು ಹೇಳಿದರು.

ADVERTISEMENT

ಅಮೆರಿಕದ ರಾಜಕೀಯ ವಿಜ್ಞಾನಿ ಕ್ರಿಸ್ಟಿನ್‌ ಫೇರ್, ‘ಪಾಕಿಸ್ತಾನವು ಮೊದಲಿನಿಂದ ಪರೋಕ್ಷ ಅಥವಾ ಛಾಯಾ ಸಮರ ನಡೆಸುತ್ತಿದೆ. ಅದು ಭಯೋತ್ಪಾದನೆಯಾಗಿರಬಹುದು, ಜಿಹಾದಿ ವಾದ ಅಥವಾ ಸೈದ್ಧಾಂತಿಕ ದಾಳಿಯಾಗಿರಬಹುದು. ಇಂತಹ ದಾಳಿಗಳನ್ನು ಅದು ನಿರಂತರವಾಗಿ ಮಾಡುತ್ತಿರುತ್ತದೆ’ ಎಂದರು.

‘ಉಗ್ರ ರಾಷ್ಟ್ರೀಯತಾವಾದ ಸಾಬೀತುಪಡಿಸಲು ಅಥವಾ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನಿರ್ದಿಷ್ಟ ದಾಳಿಗಳನ್ನು ಯಾವುದೇ ದೇಶ ಸಂಘಟಿಸಬಹುದು. ಆದರೆ, ಇಂತಹ ಸರ್ಜಿಕಲ್‌ ಸ್ಟ್ರೈಕ್‌ನಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗದು ಮತ್ತು ಸಮಸ್ಯೆ ಅಂತ್ಯವೂ ಆಗದು’ ಎಂದು ಅಭಿಪ್ರಾಯಪಟ್ಟರು.

‘ನಿರ್ದಿಷ್ಟ ದಾಳಿ ಸಾಕ್ಷಿ ಒದಗಿಸಬೇಕಿತ್ತು’
‘ನಾನು ಭಾರತೀಯ ಸೇನೆಗೆ ಸೇರಿದವನು.ಸೇನೆಯ ಮೇಲೆ ಅನುಮಾನ ಪಡಲು ನನಗೆ ಯಾವುದೇ ಕಾರಣಗಳೂ ಇಲ್ಲ. ಆದರೆ, ಭಾರತ ನಡೆಸಿದ ಮೊದಲನೇ ನಿರ್ದಿಷ್ಟ ದಾಳಿ ನಂತರ ಮಾಧ್ಯಮಗಳನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಎಡವಿತು. ನಿರ್ದಿಷ್ಟ ದಾಳಿಯ ಒಂದೇ ಒಂದು ವಿಡಿಯೊ ಸಾಕ್ಷ್ಯವನ್ನು ಅದು ಒದಗಿಸಲಿಲ್ಲ. ಇದರ ನಂತರವೂ ಸೇನೆ ಎರಡನೇ ನಿರ್ದಿಷ್ಟ ದಾಳಿ ನಡೆಸಿತು. ಎರಡನೇ ಬಾರಿ ದಾಳಿ ನಡೆಸುವ ಅಗತ್ಯವಿತ್ತೇ ಎಂದೂ ನಾವು ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಹಸ್ನೇನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.