ADVERTISEMENT

‘ವರ್ಗಾವಣೆಗೆ ಪ್ರಭಾವ ಬೀರಿದರೆ ಅಮಾನತು’

ಸಚಿವರ ಖಡಕ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:35 IST
Last Updated 17 ಡಿಸೆಂಬರ್ 2019, 19:35 IST
   

ಬೆಂಗಳೂರು: ಗ್ರಂಥಾಲಯ ಇಲಾಖೆಯಲ್ಲಿ ಆಯಾಕಟ್ಟಿನ ‘ಗ್ರಂಥಾಲಯ’ಗಳಿಗೆ ವರ್ಗಾವಣೆ ಹೊಂದಲು ಅಧಿಕಾರಿಗಳು ಪ್ರಭಾವ ಬೀರಿದರೆ, ಅಮಾನತು ಮಾಡಲಾಗುವುದು ಎಂದುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈಚೆಗೆ ನಡೆದ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಅವರು, ‘ಲಾಬಿ ನಡೆಸುವ ಅಧಿಕಾರಿಗಳ ವಿರುದ್ಧ ಸಿಸಿಎ ನಿಯಮದ ಅನ್ವಯ ಶಿಸ್ತು ಕ್ರಮ ತೆಗೆದುಕೊಳ್ಳುವುದರ ಜತೆಗೆ
ಅಮಾನತಿನಲ್ಲಿ ಇಡಲಾಗುವುದು’ ಎಂದು ಹೇಳಿದ್ದಾರೆ.

‘ಅಧಿಕಾರಿಗಳು ಹೊರಗಿನ ವ್ಯಕ್ತಿಗಳ ಮೂಲಕ ಪ್ರಭಾವ ಬೀರುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಇದು ಕೆಟ್ಟ ಸಂಪ್ರದಾಯ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.ಸಭೆಯ ನಡಾವಳಿಯಲ್ಲೂ ಈ ವಿಷಯ ದಾಖಲಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘ವರ್ಗಾವಣೆಗೆ ಸಂಬಂಧಿಸಿ ಇಲಾಖೆಯ ಅಧೀನ ಅಧಿಕಾರಿಗಳು ಪ್ರಭಾವ ಬೀರುತ್ತಿದ್ದಾರೆ. ಇದರಿಂದಾಗಿ ಆದೇಶ ಜಾರಿ ಮಾಡಲು ಮುಜುಗರ ಉಂಟಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಪ್ರಮುಖ ನಗರ/ಜಿಲ್ಲಾ ಗ್ರಂಥಾಲಯಗಳು ಹಾಗೂ ಬೆಂಗಳೂರಿನ ಐದು ಕೇಂದ್ರ ವಲಯಗಳ ಗ್ರಂಥಾಲಗಳಿಗೆ ಭಾರಿ ಬೇಡಿಕೆ ಇದೆ. ಇವುಗಳಿಗೆ ವರ್ಷದಲ್ಲಿ ಕೋಟಿಗಟ್ಟಲೆ ಅನುದಾನ ಲಭಿಸುತ್ತದೆ. ಹೀಗಾಗಿ ಈ ಕೇಂದ್ರಗಳಿಗೆ ವರ್ಗಾವಣೆ ಪಡೆಯಲು ಲಾಬಿ ಹೆಚ್ಚಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಗ್ರಂಥಾಲಯ ಇಲಾಖೆ ಅಧಿಕಾರಿಗಳ ಪಾಲಿಗೆ ಆಯಕಟ್ಟಿನ ಸ್ಥಳ ಎನಿಸಿರುವ ಗ್ರಂಥಾಲಯಗಳಿಗೆ ವರ್ಗಾವಣೆ ಪಡೆಯಲು ಪ್ರತಿ ವರ್ಷ ಅಧಿಕಾರಿಗಳ ಮಧ್ಯೆಯೇ ಪೈಪೋಟಿ ಜೋರಾಗಿರುತ್ತದೆ. ಹೆಚ್ಚುಪ್ರಭಾವ ಬೀರಲು
ಸಾಧ್ಯವಾಗವವರು ಮಾತ್ರ ಆಯಕಟ್ಟಿನ ಹುದ್ದೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಶಕ್ತರಾಗುತ್ತಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.