ADVERTISEMENT

ಹಸಿರು ಬಜೆಟ್‌ಗೆ ತಯಾರಿ: ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ

ಕೆ.ಜೆ.ಮರಿಯಪ್ಪ
Published 20 ಜನವರಿ 2020, 22:09 IST
Last Updated 20 ಜನವರಿ 2020, 22:09 IST
   

ಬೆಂಗಳೂರು: ಸುಸ್ಥಿರ ಪರಿಸರ ಕಾಪಾಡಿಕೊಳ್ಳುವ ಜತೆಗೆ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿ ‘ಹಸಿರು ಬಜೆಟ್’ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥ ಒಂದು ಚಿಂತನೆ ಮೂಡಿದ್ದು,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದೇಶ ಪ್ರವಾಸದಿಂದ ವಾಪಸ್ ಬಂದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬಜೆಟ್‌ನ ಒಂದು ಭಾಗವಾಗಿ ‘ಹಸಿರು ಬಜೆಟ್’ ಮಂಡಿಸುವ ಕುರಿತು ಹಣಕಾಸು ಇಲಾಖೆ ರೂಪುರೇಷೆ ಸಿದ್ಧಪಡಿಸುತ್ತಿದೆ.

‘ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಸ್ತಾವ ಸಿದ್ಧಪಡಿಸಿ, ಹಣಕಾಸು ಇಲಾಖೆಗೆ ಸಲ್ಲಿಸಿದೆ. ಅದನ್ನು ಯಾವ ರೀತಿ ಬಜೆಟ್‌ನಲ್ಲಿ ಅಳವಡಿಸಬೇಕು ಎಂಬ ಚಿಂತನೆ ನಡೆದಿದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಪರಿಸರ ಹಾನಿ ತಡೆ ಉದ್ದೇಶ
ಹೊಸದಾಗಿ ರೂಪಿಸುವ ಯೋಜನೆಗಳ ಜಾರಿ ಹಾಗೂ ಪ್ರಸ್ತುತ ಚಾಲ್ತಿಯಲ್ಲಿ ಇರುವ ಯೋಜನೆಗಳಿಂದ ಪರಿಸರದ ಮೇಲೆ ಯಾವ ಪ್ರಮಾಣದಲ್ಲಿ ಹಾನಿಯಾಗುತ್ತದೆ. ನಿರ್ದಿಷ್ಟ ಕಾಮಗಾರಿಯಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುವಂತಿದ್ದರೆ ಏನು ಮಾಡಬೇಕು, ಅನುಷ್ಠಾನದ ಸಮಯದಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮೊದಲಾದ ಅಂಶಗಳನ್ನು ಇದು ಒಳಗೊಂಡಿರುತ್ತದೆ.

‘ಅರಣ್ಯ ಇಲಾಖೆ ಕೆಲವು ಮಾನದಂಡಗಳನ್ನು (ಟೂಲ್ ಕಿಟ್) ಸಿದ್ಧಪಡಿಸಿದ್ದು, ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಅಧ್ಯಯನ ಮಾಡಲಾಗುತ್ತದೆ. ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಕೆಂಪು, ಹಳದಿ, ಹಸಿರು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಗುರುತು ಮಾಡಲಾಗುತ್ತದೆ. ಸಂಬಂಧಿಸಿದ ಯೋಜನೆ ಯಾವ ಬಣ್ಣದ ವ್ಯಾಪ್ತಿಗೆ ಬರುತ್ತದೆ (ಪರಿಸರದ ಮೇಲಿನ ಹಾನಿಯನ್ನು ಅಂದಾಜಿಸುವುದು), ಅದನ್ನು ಜಾರಿಮಾಡಬೇಕೆ? ಬೇಡವೆ? ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.