ADVERTISEMENT

ಸ್ವಚ್ಛ ಸರ್ವೇಕ್ಷಣ್‌ ಸರ್ವೆ 2021: ಶ್ರೇಯಾಂಕ ಸುಧಾರಿಸಿಕೊಂಡ ಬಿಬಿಎಂಪಿ

ಕಸಮುಕ್ತ ನಗರ ವಿಭಾಗದಲ್ಲಿ ಶೂನ್ಯ ಅಂಕ ಗಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 7:50 IST
Last Updated 22 ನವೆಂಬರ್ 2021, 7:50 IST
ಸ್ವಚ್ಛ ಸರ್ವೇಕ್ಷಣ್ ಸರ್ವೇ 2021ರ ವೇಗವಾಗಿ ಸಾಗುತ್ತಿರುವ ಮಹಾನಗರಗಳ ವಿಭಾಗದಲ್ಲಿ (ಫಾಸ್ಟೆಸ್ಟ್ ಮೂವರ್ ಮೆಗಾ ಸಿಟಿ) ಬಿಬಿಎಂಪಿ ‘ಸ್ವಚ್ಛ ನಗರ’ ಗೌರವಕ್ಕೆ ಪಾತ್ರವಾಗಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನವದೆಹಲಿಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ‌ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ಬಿಬಿಎಂಪಿ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಾ. ಹರೀಶ್ ಕುಮಾರ್ (ಬಲದಿಂದ ಎರಡನೆಯವರು), ಜಂಟಿ ಆಯುಕ್ತ ಸರ್ಫರಾಜ್ ಖಾನ್ ಇದ್ದಾರೆ.
ಸ್ವಚ್ಛ ಸರ್ವೇಕ್ಷಣ್ ಸರ್ವೇ 2021ರ ವೇಗವಾಗಿ ಸಾಗುತ್ತಿರುವ ಮಹಾನಗರಗಳ ವಿಭಾಗದಲ್ಲಿ (ಫಾಸ್ಟೆಸ್ಟ್ ಮೂವರ್ ಮೆಗಾ ಸಿಟಿ) ಬಿಬಿಎಂಪಿ ‘ಸ್ವಚ್ಛ ನಗರ’ ಗೌರವಕ್ಕೆ ಪಾತ್ರವಾಗಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನವದೆಹಲಿಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ‌ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು. ಬಿಬಿಎಂಪಿ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಾ. ಹರೀಶ್ ಕುಮಾರ್ (ಬಲದಿಂದ ಎರಡನೆಯವರು), ಜಂಟಿ ಆಯುಕ್ತ ಸರ್ಫರಾಜ್ ಖಾನ್ ಇದ್ದಾರೆ.   

ಬೆಂಗಳೂರು: ಸ್ವಚ್ಛ ನಗರಗಳನ್ನು ಗುರುತಿಸುವ ಸ್ವಚ್ಛ ಸರ್ವೇಕ್ಷಣ್‌ ಸಮೀಕ್ಷೆ 2021ರಲ್ಲಿ ಬಿಬಿಎಂಪಿಯು ಶ್ರೇಯಾಂಕವನ್ನು ತುಸು ಸುಧಾರಿಸಿಕೊಂಡಿದೆ. 2020ರ ಸಮೀಕ್ಷೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 47 ನಗರಗಳಲ್ಲಿ 37ನೇ ಸ್ಥಾನ ಪಡೆದಿದ್ದ ಪಾಲಿಕೆ ಈ ಬಾರಿ 48 ನಗರಗಳಲ್ಲಿ 28ನೇ ಸ್ಥಾನಗಳಿಸಿದೆ.

ಈ ಸಲದ ಸ್ಪರ್ಧೆಯಲ್ಲಿ ‘ಪ್ರೇರಕ್‌ ದೌಡ್‌ ಸಮ್ಮಾನ್‌’ ವರ್ಗದಲ್ಲಿ ದಿವ್ಯಾ (ಪ್ಲಾಟಿನಂ), ಅನುಪಮ (ಚಿನ್ನ), ಉಜ್ವಲ (ಬೆಳ್ಳಿ), ಉದಿತ್‌ (ಕಂಚು) ಹಾಗೂ ಆರೋಹಿ (ಭರವಸೆದಾಯಕ) ಎಂಬ ಐದು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆರು ಸೂಚ್ಯಂಕಗಳನ್ನು ಆಧರಿಸಿ ಈ ವರ್ಗೀಕರಿಸಲಾಗಿತ್ತು. ಕಸವನ್ನು ಹಸಿ, ಒಣ ಹಾಗೂ ಅಪಾಯಕಾರಿ ಎಂದು ವಿಂಗಡಿಸುವುದು, ಹಸಿ ಕಸದಲ್ಲಿ ಸಂಸ್ಕರಣೆಗೆ ಒಳಗಾಗುವ ಕಸದ ಪ್ರಮಾಣ, ಹಸಿ ಮತ್ತು ಒಣ ಕಸಗಳ ಸಂಸ್ಕರಣೆ ಮತ್ತು ಮರುಬಳಕೆ, ಕಟ್ಟಡ ತ್ಯಾಜ್ಯಗಳ ಸಂಸ್ಕರಣೆ, ಭೂಭರ್ತಿ ಕೇಂದ್ರಕ್ಕೆ ತಲುಪುವ ಕಸದ ಪ್ರಮಾಣ ನಗರದ ನೈರ್ಮಲ್ಯ ಗುಣಮಟ್ಟ ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ನಡೆದಿದೆ. ಇದರಲ್ಲಿ ಯಾವ ವಿಭಾಗದಲ್ಲೂ ಬಿಬಿಎಂಪಿ ಸ್ಥಾನ ಪಡೆದಿಲ್ಲ.

ಈ ಬಾರಿಯ ಸ್ಪರ್ಧೆಯಲ್ಲಿ ಪಾಲಿಕೆಗಳ ಸೇವಾ ಗುಣಮಟ್ಟದ ಸುಧಾರಣೆ (ಗರಿಷ್ಠ 2400 ಅಂಕ), ಪ್ರಮಾಣೀಕರಣ (ಗರಿಷ್ಠ 1800 ಅಂಕ) ಹಾಗೂ ನಾಗರಿಕರ ಪ್ರತಿಕ್ರಿಯೆ (ಗರಿಷ್ಠ 1800) ಸೇರಿದಂತೆ ಒಟ್ಟು 6000 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಬಿಬಿಎಂಪಿ ಒಟ್ಟು 3585.5 ಅಂಕಗಳನ್ನು ಪಡೆದಿದೆ. ರಾಷ್ಟ್ರೀಯ ಸರಾಸರಿಗಿಂತ (2,072) ಹಾಗೂ ರಾಜ್ಯದ ಸರಾಸರಿಗಿಂತ (1,530) ಬಿಬಿಎಂ‍ಪಿ ಮುಂದಿದೆ. ಈ ಬಾರಿಯೂ ‘ಕಸ ಮುಕ್ತ ನಗರ’ (ಜಿಎಫ್‌ಸಿ) ವಿಭಾಗದಲ್ಲಿ ಶೂನ್ಯ ಸಾಧನೆ ಮಾಡಿರುವುದು ಬಿಬಿಎಂಪಿ ಸ್ವಚ್ಛತಾ ಸಮೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಕನಸಿಗೆ ಕೊಳ್ಳಿ ಇಟ್ಟಿದೆ.

ADVERTISEMENT

ಪ್ರಮಾಣೀಕರಣ ವಿಭಾಗದಲ್ಲಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಕಾರ್ಯಗಳಿಗೆ 500 ಅಂಕ ನಿಗದಿಪಡಿಸಲಾಗಿದೆ. ಒಡಿಎಫ್‌ ಪ್ಲಸ್‌ ಹಾಗೂ ಒಡಿಎಫ್‌ ಪ್ಲಸ್‌ ಪ್ಲಸ್‌ ಶ್ರೇಯವನ್ನು 2020ರಲ್ಲೇ ಪಡೆದಿತ್ತು. ಈ ಬಾರಿ ಕಸ ಮುಕ್ತ ನಗರ ವಿಭಾಗದಲ್ಲಿ ಅಂಕ ಗಳಿಸುವ ಅವಕಾಶ ಬಿಬಿಎಂಪಿಗೆ ಇತ್ತು. ಆದರೆ, ಈ ವಿಭಾಗದಲ್ಲಿ ಯಾವುದೇ ಅಂಕ ಸಿಕ್ಕಿಲ್ಲ. ಹಾಗಾಗಿ ಈ ವಿಭಾಗದ 1800 ಅಂಕಗಳಲ್ಲಿ ಕೇವಲ 500 ಅಂಕಗಳಿಗಷ್ಟೇ ಬಿಬಿಎಪಿ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಬಿಬಿಎಂಪಿಗೆ ಹೆಚ್ಚು ಅಂಕ ಸಿಕ್ಕಿರುವುದು (1,933.10) ಸೇವಾ ಗುಣಮಟ್ಟ ಸುಧಾರಣೆ ವಿಭಾಗದಲ್ಲಿ. ಈ ಸಾಧನೆಯಿಂದಾಗಿ ಕಳೆದ ಸಾಲಿಗಿಂತ ತುಸು ಉತ್ತಮ ಸಾಧನೆ ತೋರಿಸಲು ಸಾಧ್ಯವಾಗಿದೆ.

ನಾಗರಿಕರ ಪ್ರತಿಕ್ರಿಯೆಗೆ ಈ ಬಾರಿ ಗರಿಷ್ಠ 1800 ಅಂಕ ಪಡೆಯುವ ಅವಕಾಶವಿತ್ತು. ಅದರಲ್ಲಿ ಬಿಬಿಎಂಪಿಗೆ 1152.45 ಅಂಕಗಳು ಸಿಕ್ಕಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ವಿಭಾಗದಲ್ಲಿ ತುಸು ಉತ್ತಮ ಸಾಧನೆಯನ್ನು ಬಿಬಿಎಂಪಿ ಮಾಡಿದೆ. ನಾಗರಿಕರ ಪ್ರತಿಕ್ರಿಯೆ ಹೆಚ್ಚಿಸಲು ಬಿಬಿಎಂಪಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಅಲ್ಲಲ್ಲಿ ಜಾಥಾಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಿತ್ತು.

‘ಕಸ ಮುಕ್ತ ವಿಭಾಗದಲ್ಲಿ ಶೂನ್ಯ ಅಂಕ ನೀಡುವಷ್ಟರ ಮಟ್ಟಿಗೆ ನಮ್ಮ ನಿರ್ವಹಣೆ ಕಳಪೆ ಏನಿಲ್ಲ. ದೇಶದಲ್ಲಿ 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಇತರ ನಗರಗಳಿಗೆ ಹೋಲಿಸಿದರೆ ಸ್ವಚ್ಛತೆ ನಿರ್ವಹಣೆಯಲ್ಲಿ ಬಿಬಿಎಂಪಿ ಸಾಕಷ್ಟು ಮುಮದೆ ಇದೆ. ಕೇಂದ್ರ ಸರ್ಕಾರವು ಸೂಚಿಸಿದ ತಂತ್ರಾಂಶವನ್ನು ಬಳಸುತ್ತಿಲ್ಲ ಎಂಬ ಕಾರಣಕ್ಕೆ ಅಂಕ ಕಡಿತ ಮಾಡಲಾಗಿದೆ. ಕೋವಿಡ್‌ ತೀವ್ರವಾಗಿದ್ದುದರಿಂದ ಈ ಬಾರಿ ಕಸ ನಿರ್ವಹಣೆಯ ವಿಶ್ಲೇಷಣೆಯೂ ಸಮರ್ಪಕವಾಗಿ ನಡೆದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ತಕ್ಕಡಿ ಸರಿಯೇ?’

‘10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳೆಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಕಸ ನಿರ್ವಹಣೆ ವಿಚಾರದಲ್ಲಿ ಎದುರಿಸುವ ಸಮಸ್ಯೆಗಳು ವಿಭಿನ್ನವಾಗಿವೆ. ಅವುಗಳ ಕಾರ್ಯವಿಧಾನವೂ ಬೇರೆಯೇ. ಹಾಗಾಗಿ 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸುವುದು ಸಮಂಜಸ. ಈ ವಿಚಾರವನ್ನು ನಾವು ಹಾಗೂ ಬೃಹನ್‌ ಮುಂಬೈ ಮಹಾನಗರ ಪಾಲಿಕೆಯವರೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತಂದಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತ್ಯೇಕ ಕಂಪನಿಯಿಂದ ಸುಧಾರಣೆ?

ನಗರದ ಕಸ ವಿಲೇವಾರಿಗಾಗಿ ಸರ್ಕಾರ ‘ಬೆಂಗಳೂರು ಕಸ ನಿರ್ವಹಣೆ ನಿಯಮಿತ’ ಕಂಪನಿಯನ್ನು ಐದು ತಿಂಗಳ ಹಿಂದೆ ಸ್ಥಾಪಿಸಿದೆ. ಸಾರ್ವಜನಿಕ ಶೌಚಾಲಯಗಳ ಕಸ ಹಾಗೂ ಜೈವಿಕ– ವೈದ್ಯಕೀಯ ಕಸವನ್ನು ಹೊರತಾಗಿ ಉಳಿದ ಎಲ್ಲ ರೀತಿಯ ಕಸಗಳನ್ನು ಈ ಕಂಪನಿಯೇ ನಿರ್ವಹಿಸಬೇಕಿದೆ. ಕಸ ಸಂಗ್ರಹ, ವಿಂಗಡಣೆ, ರವಾನೆ, ಸಂಸ್ಕರಣೆ, ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿ, ಮರುಬಳಕೆ ಹಾಗೂ ವಿಲೇವಾರಿ ಕುರಿತ ಎಲ್ಲ ಹೊಣೆಗಳೂ ಈ ಕಂಪನಿಯದ್ದಾಗಿದೆ. ಆದರೆ, ಕಂಪನಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಆರಂಭಿಸಿಲ್ಲ.

‘ಈ ಕಂಪನಿ ಪೂರ್ಣ ಪ್ರಮಾಣ ದಲ್ಲಿ ಕಾರ್ಯನಿರ್ವಹಣೆ ಆರಂಭಿಸಿದ ಬಳಿಕ ಕಸ ನಿರ್ವಹಣೆಯ ಪರಿಸ್ಥಿತಿ ಮತ್ತಷ್ಟು ಸುಧಾರಣೆಯಾಗುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.