
ಯೂನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕೆಂಗೇರಿ: ಸ್ವದೇಶಿ ದೃಷ್ಟಿಕೋನದಲ್ಲಿ ವಿಕಸಿತ ಭಾರತ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಭಾರತೀಯ ಪರಂಪರೆಯ ನಿಜ ದರ್ಶನ ನೀಡುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದು ಮೈಸೂರು–ಕೊಡಗು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಯೂನಿವರ್ಸಲ್ ಸಮೂಹ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಾಗೂ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯೊಡನೆ ಭಾರತವು ಎಲ್ಲಾ ರಂಗಗಳಲ್ಲೂ ಪ್ರಗತಿ ಸಾಧಿಸುತ್ತಿದೆ. ಈ ವಿಕಾಸ ಪರ್ವವು ದೇಶದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಇಮ್ಮಡಿಗೊಳಿಸುವಂತೆ ಇರಬೇಕು. ಸ್ವಂತಿಕೆ, ಸ್ವಾಭಿಮಾನ ಉದ್ದೀಪನಗೊಳಿಸುವಂತಿರಬೇಕು. ಹೀಗಾಗಿ ಸ್ವತಂತ್ರ ಪೂರ್ವದ ಮೆಕಾಲೆ ಶಿಕ್ಷಣ ನೀತಿ ಪರಿಷ್ಕರಿಸುವ ಅಗತ್ಯತೆಯಿದೆ ಎಂದರು.
ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯ. ಆದರ ಯಶಸ್ಸು ಹಾಗೂ ಸೋಲು ಅಧಿಕಾರಿ ವರ್ಗದ ಮೇಲೆ ನಿಂತಿದೆ. ನಿಷ್ಠಾವಂತ ಅಧಿಕಾರಿಗಳಿಂದಲೇ ಮೈಸೂರು ಸಂಸ್ಥಾನ ಇಂದಿಗೂ ಜನ ಮನ್ನಣೆಸಗಳಿಸಿದೆ ಎಂದರು.
ಯೂನಿವರ್ಸಲ್ ಸಮೂಹ ಸಂಸ್ಥೆಯ ಚೇರ್ಮನ್ ಆರ್. ಉಪೇಂದ್ರ ಶೆಟ್ಟಿ ಮಾತನಾಡಿ, ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಯೂನಿವರ್ಸಲ್ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇಲ್ಲಿನ 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧಿಕಾರಿಗಳಾಗಿ ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಮರಿಸಿದರು. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ 10 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.