
ಯಲಹಂಕ: ಕರ್ನಾಟಕ ಅಮೆಚೂರು ಟೇಕ್ವಾಂಡೊ ಅಸೋಸಿಯೇಷನ್ ಆಶ್ರಯದಲ್ಲಿ ‘28ನೇ ರಾಷ್ಟ್ರೀಯ ಮಟ್ಟದ ಟೆಕ್ವಾಂಡೊ ಚಾಂಪಿಯನ್‌ಶಿಪ್ʼ ಪಂದ್ಯಾವಳಿಗೆ ಅಖಿಲ ಭಾರತ ಟೆಕ್ವಾಂಡೊ ಅಸೋಸಿಯೇಷನ್ ಅಧ್ಯಕ್ಷ ಮಾರುತಿ ಪ್ರಸಾದ್ ಚಾಲನೆ ನೀಡಿದರು.
‘ಹೆಣ್ಣಾಗಲಿ ಅಥವಾ ಗಂಡಾಗಲಿ ಟೇಕ್ವಾಂಡೊ ಕ್ರೀಡೆಯನ್ನು ಕಲಿತಿದ್ದರೆ, ಒಬ್ಬರೇ ಇದ್ದಾಗ ಯಾರಾದರೂ ಅನಿರೀಕ್ಷಿತವಾಗಿ ದಾಳಿ ಮಾಡಿದ ಸಂದರ್ಭದಲ್ಲಿ ಸ್ವಯಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಅಮೆಚೂರು ಟೇಕ್ವಾಂಡೊ ಅಸೋಸಿಯೇಷನ್ ಅಧ್ಯಕ್ಷ ಸುಬ್ಬರಾಯ.ಎ ಹೇಳಿದರು.
ಮಕ್ಕಳೂ ಸೇರಿದಂತೆ ಯುವಕರಲ್ಲಿ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿ, ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಪುದುಚೇರಿ, ಮಧ್ಯಪ್ರದೇಶಗಳಿಂದ ಟೇಕ್ವಾಂಡೊ ಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. 10 ವರ್ಷದಿಂದ 60 ವರ್ಷದ ವಯೋಮಾನದವರಿಗಾಗಿ ವಿವಿಧ ವಿಭಾಗಗಳಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ವಿಜೇತ ತಂಡಗಳಿಗೆ ಪಾರಿತೋಷಕ ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.