ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ತಲಾಖ್: ವಿಮಾನನಿಲ್ದಾಣದಲ್ಲೇ ಪತ್ನಿ ಬಿಟ್ಟು ಪರಾರಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 5:15 IST
Last Updated 9 ಡಿಸೆಂಬರ್ 2018, 5:15 IST
ಪತ್ನಿ ಜೊತೆ ಜಾವೀದ್
ಪತ್ನಿ ಜೊತೆ ಜಾವೀದ್   

ಬೆಂಗಳೂರು: ಅಮೆರಿಕದಲ್ಲಿ ನೆಲೆಸಿರುವ ಡಾ. ಜಾವೀದ್ ಎಂಬುವರು ತಮ್ಮ ಪತ್ನಿ ರೇಷ್ಮಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲೇ ‘ತಲಾಖ್‌ (ವಿಚ್ಛೇದನ)’ ಸಂದೇಶ ಕಳುಹಿಸಿ, ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ (ಕೆಐಎ) ಬಿಟ್ಟು ಪರಾರಿಯಾಗಿದ್ದಾರೆ.

ಪತಿಯ ವರ್ತನೆಯಿಂದ ನೊಂದಿರುವ ರೇಷ್ಮಾ, ರಾಜಾಜಿನಗರದ ಶಾಸಕ ಸುರೇಶ್‌ಕುಮಾರ್ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ಅವರಿಗೂ ದೂರು ನೀಡಿದ್ದಾರೆ.

ಮಲ್ಲೇಶ್ವರದ ನಿವಾಸಿಯಾದ ರೇಷ್ಮಾ ಅವರನ್ನು 2003ರಲ್ಲಿ ಸ್ಥಳೀಯ ನಿವಾಸಿಯೇ ಆದ ಜಾವೀದ್‌ಗೆ ಮದುವೆ ಮಾಡಿಕೊಡಲಾಗಿತ್ತು. ಅದಾದ ಬಳಿಕ ದಂಪತಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. ಕಳೆದ ವರ್ಷವಷ್ಟೇ ಜಾವೀದ್‌ಗೆ ಅಮೆರಿಕಕ್ಕೆ ವರ್ಗ ಆಗಿತ್ತು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ADVERTISEMENT

ಕೆಲವು ತಿಂಗಳಿನಿಂದ ದಂಪತಿ ನಡುವೆ ಜಗಳ ಶುರುವಾಗಿತ್ತು. ಹಿರಿಯರ ಸಲಹೆ ಪಡೆಯೋಣವೆಂದಿದ್ದ ಜಾವೀದ್‌, ಇಬ್ಬರು ಮಕ್ಕಳನ್ನು ಅಮೆರಿಕದಲ್ಲೇ ಬಿಟ್ಟು ಪತ್ನಿಯನ್ನಷ್ಟೇ ನ. 30ರಂದು ಬೆಂಗಳೂರಿಗೆ ಕರೆತಂದಿದ್ದರು. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಪತ್ನಿಯ ಪಾಸ್‌ಪೋರ್ಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ನ್ನು ಜಾವೀದ್‌ ಪಡೆದುಕೊಂಡಿದ್ದರು. ನಂತರ, ಪತ್ನಿಯನ್ನು ನಿಲ್ದಾಣದಲ್ಲೇ ಬಿಟ್ಟು ಅಮೆರಿಕಕ್ಕೆ ವಾಪಸ್‌ ಹೊರಟು ಹೋಗಿದ್ದಾರೆ.

ಅದಾದ ಕೆಲವೇ ನಿಮಿಷಗಳಲ್ಲಿ ಪತ್ನಿಯ ಮೊಬೈಲ್‌ಗೆ ಸಂದೇಶ ಕಳುಹಿಸಿರುವ ಜಾವೀದ್, ‘ಯಾವುದೇ ಒತ್ತಡಕ್ಕೆ ಒಳಗಾಗದೇ ತುಂಬಾ ಯೋಚಿಸಿ ಅಲ್ಲಾಹ್‌ ಸಾಕ್ಷಿಯಾಗಿ ಈ ಸಂದೇಶ ಕಳುಹಿಸುತ್ತಿದ್ದೇನೆ. ತಲಾಖ್... ತಲಾಖ್... ತಲಾಖ್‌...’ ಎಂದು ಹೇಳಿದ್ದಾರೆ.

‘ವಿದ್ಯಾವಂತನಾದ ಜಾವೀದ್‌, ತಲಾಖ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದಾನೆ. ಯುವತಿ ಸಾಕಷ್ಟು ನೊಂದಿದ್ದಾಳೆ’ ಎಂದು ಶಾಸಕ ಸುರೇಶ್‌ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.