ADVERTISEMENT

ಬಿಬಿಎಂಪಿ ಚುನಾವಣೆ ವಿಳಂಬ; ವಾಗ್ವಾದ

ದದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 20:52 IST
Last Updated 7 ಜನವರಿ 2023, 20:52 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ವಿಳಂಬದ ಚರ್ಚೆ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕಾಂಗ್ರೆಸ್‌ ಶಾಸಕಿ ಸೌಮ್ಯರೆಡ್ಡಿ ಪರಸ್ಪರ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿತು.

‘ಡಿಎಚ್‌ ಬೆಂಗಳೂರು 2040 ಶೃಂಗ’ದಲ್ಲಿ ಬೆಂಗಳೂರಿಗೆ ಚುನಾವಣಾ ಪ್ರಣಾಳಿಕೆ ವಿಷಯ ಕುರಿತು ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಲು ಬಹು ದಿನಗಳಿಂದ ಬೇಡಿಕೆ ಇತ್ತು. ಕಾಯ್ದೆ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋದರು. ಕೆಲವರು 198 ವಾರ್ಡ್‌ಗಳಿಗೆ ‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್‌’ ಕಾಯ್ದೆಯ ಪ್ರಕಾರ ಚುನಾವಣೆ ನಡೆಸಬೇಕು ಎಂದು ಬಯಸಿದ್ದರು. ವಿಷಯ ನ್ಯಾಯಾಲಯದಲ್ಲಿದೆ. ಅದು ಇತ್ಯರ್ಥವಾದ ನಂತರ ಚುನಾವಣೆ ನಡೆಸುತ್ತೇವೆ. ಚುನಾಯಿತ ಸಂಸ್ಥೆಯ ಅನುಪಸ್ಥಿತಿಯಲ್ಲಿ ಸರ್ಕಾರ ನಾಗರಿಕ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಸೌಮ್ಯರೆಡ್ಡಿ, ‘ಶಾಸಕರು ಕಾನೂನು ರೂಪಿಸುವ ಕೆಲಸ ಮಾಡಬೇಕು. ಕಸ ಮತ್ತು ನೈರ್ಮಲ್ಯದ ಸಮಸ್ಯೆಗಳನ್ನು ಪರಿಹರಿಸುವುದಲ್ಲ. ಆರು ತಿಂಗಳವರೆಗೆ ಮಾತ್ರ ಆಡಳಿತಾಧಿಕಾರಿ ನೇಮಿಸಬಹುದು. ಆದರೆ, ಬಿಬಿಎಂಪಿ ಎರಡೂವರೆ ವರ್ಷಗಳಿಂದ ಚುನಾಯಿತ ಸಂಸ್ಥೆ ಹೊಂದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ’ ಎಂದರು.

ವಿಧಾನಸಭೆಯಲ್ಲಿ ಬೆಂಬಲಿಸಿದ ನಂತರವೂ ಹೊಸ ಕಾಯ್ದೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಚುನಾವಣೆ ವಿಳಂಬಗೊಳಿಸಿದ್ದು ಕಾಂಗ್ರೆಸ್‌ ಎಂದು ಅಶ್ವತ್ಥನಾರಾಯಣ ಕುಟುಕಿದರು.

‘ಮೀಸಲಾತಿ ಅವೈಜ್ಞಾನಿಕವಾಗಿವೆ ಎನ್ನುವುದು ಕಾಂಗ್ರೆಸ್‌ ಆಕ್ಷೇಪ. ಜಯನಗರ ಕ್ಷೇತ್ರದ ಬಹುತೇಕ ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿವೆ. ಅದಕ್ಕಾಗಿ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. ನೀವು (ಸರ್ಕಾರ) ನಮ್ಮನ್ನು ಸಂಪರ್ಕಿಸಿಲ್ಲ. ಆರ್‌ಎಸ್‌ಎಸ್ ಮತ್ತು ಸಂಸದರ (ಬೆಂಗಳೂರು ದಕ್ಷಿಣ) ಕಚೇರಿಯಲ್ಲಿ ಈ ಮೀಸಲಾತಿ ನಿಗದಿಯಾಗಿದೆ’ ಎಂದು ಸೌಮ್ಯರೆಡ್ಡಿ ತಿರುಗೇಟು ನೀಡಿದರು.

ಚುನಾಯಿತ ಪ್ರತಿನಿಧಿಯಾಗಿ, ಪುರಾವೆಗಳಿಲ್ಲದೆ ಹೇಳಿಕೆ ನೀಡಬಾರದು. ಬೆಂಗಳೂರು ಜನರನ್ನು ನಿರಾಸೆಗೊಳಿಸಿದ್ದೇ ಕಾಂಗ್ರೆಸ್ ಎಂದು ಸಚಿವರು ದೂಷಿಸಿದರು.

ಜನರಿಂದ ನೇರ ಚುನಾವಣೆಯ ಮೂಲಕ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯಸ್ಥರಾದ ಮೇಯರ್‌ ಆಯ್ಕೆ ನಡೆಯಬೇಕು ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ, ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್ ಸಲಹೆ ನೀಡಿದರು.

‘ಸಾಮಾನ್ಯ ನಾಗರಿಕರನ್ನು ಪ್ರತ್ಯೇಕಿಸುವ ಗೇಟೆಡ್‌ ಲೇಔಟ್‌ಗಳನ್ನು ರೂಪಿಸಿ, ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇಲಿ ಸಾಮಾಜಿಕ ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

‘ಬೆಂಗಳೂರಿನ ಸಾರ್ವಜನಿಕ ಸ್ಥಳಗಳ ಮರು ವ್ಯಾಖ್ಯಾನ’ ಕುರಿತು ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ಕ್ರೀಡಾ ಸೌಲಭ್ಯಗಳು, ಮನರಂಜನಾ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಆದಾಗ್ಯೂ, ಅವುಗಳ ನಿರ್ವಹಣೆ, ನಾಗರಿಕರ ಸುರಕ್ಷತೆ ಖಾತ್ರಿಪಡಿಸುವುದು ದೊಡ್ಡ ಸವಾಲು. ಜನರಲ್ಲಿ ಸಾರ್ವಜನಿಕ ಸ್ಥಳಗಳ ಕುರಿತು ಮಾಲೀಕತ್ವದ ಭಾವನೆ ಮೂಡಿಸಲು ಅಭಿಯಾನ ಕೈಗೊಳ್ಳಬೇಕು ಎಂದು ಪುರವಂಕರ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಹೇಳಿದರು.

ಡೆಲಾಯ್ಟ್ ಕನ್ಸಲ್ಟಿಂಗ್‌ನ ಸರ್ಕಾರ ಮತ್ತು ಸಾರ್ವಜನಿಕ ಸೇವೆಗಳ ಪಾಲುದಾರ ಎನ್‌.ಎಸ್‌.ಎನ್. ಮೂರ್ತಿ
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.