ಬೆಂಗಳೂರು: ಬಿಜೆಪಿ ಸಂಸದ ಲಹರ್‌ಸಿಂಗ್ ಸಿರೋಯಾ ಅವರು ಕೈಗಾರಿಕೋದ್ಯಮಿ ಜೆ.ಸಿ. ಶರ್ಮಾ ಅವರ ಸಹಯೋಗದೊಂದಿಗೆ ‘ಪ್ರಧಾನ ಮಂತ್ರಿ ಟಿಬಿ–ಮುಕ್ತ ಭಾರತ’ ಅಭಿಯಾನದ ಅಡಿ 500 ಕ್ಷಯ ರೋಗಿಗಳನ್ನು ದತ್ತು ಪಡೆದರು.
ಕಾಮಾಕ್ಷಿಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಲಹರ್ ಸಿಂಗ್ ಅವರೊಂದಿಗೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರೂ 150 ಕ್ಷಯರೋಗಿಗಳನ್ನು ದತ್ತು ಪಡೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಲಹರ್ ಸಿಂಗ್, ‘2025ರ ವೇಳೆಗೆ ಕ್ಷಯ ಮುಕ್ತ ಭಾರತವಾಗಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಅನುಗುಣವಾಗಿ ಸಮುದಾಯ ಮತ್ತು ಮಿತ್ರರ ಬೆಂಬಲದೊಂದಿಗೆ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ 1,900 ಕ್ಷಯ ರೋಗಿಗಳನ್ನು ದತ್ತು ಪಡೆದಿದ್ದೇನೆ. ರಾಜಾಜಿನಗರ ಮತ್ತು ಗೋಪಾಲಯ್ಯನವರ ಕ್ಷೇತ್ರದ ಎಲ್ಲಾ ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಳ್ಳುತ್ತೇನೆ. ಇದರಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಮುಖ್ಯವಾಗಿದೆ’ ಎಂದರು.
‘ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡಿದರೆ, ಇನ್ನೂ ಹೆಚ್ಚಿನದ್ದನ್ನು ಸಾಧಿಸಬಹುದು. ಇದಕ್ಕಾಗಿ ಎಲ್ಲ ರೀತಿಯಲ್ಲೂ ಬೆಂಬಲಿಸಲು ನಾವು ಸಿದ್ಧರಿದ್ದೇವೆ’ ಎಂದು ತಿಳಿಸಿದರು.
‘ಇಂದು ದತ್ತು ಪಡೆದ ರೋಗಿಗಳಿಗೆ ಏಳು ತಿಂಗಳವರೆಗೆ ಪೌಷ್ಟಿಕಾಂಶಯುಕ್ತ ಆಹಾರ ಕಿಟ್ ನೀಡಲಿದ್ದೇವೆ. ಆದ್ದರಿಂದ ಅವರು ಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಆಶಿಸಿದರು.
‘ನಾನು ಶಿವಾಜಿನಗರ, ಮಲ್ಲೇಶ್ವರ, ಬಿಟಿಎಂ ಲೇಔಟ್ ಕ್ಷೇತ್ರಗಳಿಂದಲೂ ಕ್ಷಯರೋಗಿಗಳನ್ನು ದತ್ತು ಪಡೆದಿದ್ದೇನೆ. ಇದು ಸಾಮಾಜಿಕ ಸೇವೆ, ರಾಜಕೀಯವಲ್ಲ’ ಎಂದು ಸ್ಪಷ್ಟಪಡಿಸಿದರು.
ಶಾಸಕ ಕೆ.ಗೋಪಾಲಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ದತ್ತು ಪಡೆದ ಕೆಲವು ಕ್ಷಯ ರೋಗಿಗಳಿಗೆ ಆಹಾರ ಮತ್ತು ಪೌಷ್ಟಿಕಾಂಶ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ(ಟಿ.ಬಿ) ಡಾ.ಅನಿಲ್, ಮಾಜಿ ಮೇಯರ್ ರಂಗಣ್ಣ, ಮಾಜಿ ಕಾರ್ಪೊರೇಟರ್ ಪ್ರತಿಮಾ, ವೈದ್ಯಕೀಯ ಅಧಿಕಾರಿ ಡಾ. ಶಾಂತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.