ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಎಸಿಕ್ಸ್ ಫಿನಿಷರ್ ಟೀ ಬಿಡುಗಡೆ ಮಾಡಲಾಯಿತು
ಬೆಂಗಳೂರು: ಇನ್ನೊಂದು ತಿಂಗಳು ನಂತರ ನಡೆಯಲಿರುವ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಸ್ಪರ್ಧಿಸಲು 30 ಸಾವಿರಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿದ್ದಾರೆ.
ಏಪ್ರಿಲ್ 27ರಂದು ನಡೆಯುವ ಈ ಓಟದಲ್ಲಿ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ದಾಖಲೆ ಮಾಡಿರುವ (5 ಸಾವಿರ ಮೀ ಮತ್ತು 10 ಸಾವಿರ ಮೀ) ಉಗಾಂಡ ದೇಶದ ಜೋಶುವಾ ಕಿಪ್ರುಯಿ ಚೆಪ್ಜೆಗಿ ಅವರು ಈ ಬಾರಿ ಭಾಗವಹಿಸಲಿರುವುದು ವಿಶೇಷ.
ಮೂರು ಒಲಿಂಪಿಕ್ ಕೂಟಗಳಲ್ಲಿ ಸ್ಪರ್ಧಿಸಿರುವ ಜೊಶುವಾ ಅವರು 11 ವರ್ಷಗಳ ನಂತರ ಬೆಂಗಳೂರಿನಲ್ಲಿ ಸ್ಪರ್ಧಿಸಲಿದ್ದಾರೆ. ಅವರಲ್ಲಧೇ ಇಂಡಿಯನ್ ಚಾಲೆಂಜ್ ವಿಭಾಗದ ಹಾಲಿ ಚಾಂಪಿಯನ್ ಮತ್ತು ಕೂಟದ ದಾಖಲೆಯ ಒಡೆಯರಾಗಿರುವ ಕಿರಣ್ ಮಾತ್ರೆ ಮತ್ತು ಸಂಜೀವನಿ ಜಾಧವ್ ಕೂಡ ಕಣದಲ್ಲಿದ್ದಾರೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಓಟದ ಪ್ರವರ್ತಕರಾದ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್, ‘ವರ್ಷದಿಂದ ವರ್ಷಕ್ಕೆ ಟಿಸಿಎಸ್ 10ಕೆ ಓಟದ ಜನಪ್ರಿಯತೆ ಹೆಚ್ಚಾಗುತ್ತಿದೆ. ನೋಂದಣಿಗಳ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಾಣುತ್ತಿದೆ. ಓಟದ ಹವ್ಯಾಸವನ್ನು ಜನರು ಮೈಗೂಡಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಫಿಟ್‌ನೆಸ್ ಮತ್ತು ಆರೋಗ್ಯದ ಅರಿವು ಜನಸಮೂಹದಲ್ಲಿ ಮೂಡುತ್ತಿದೆ. ಈ ಓಟದ ಆಯೋಜನೆಯ ಪ್ರಮುಖ ಉದ್ದೇಶವೂ ಆರೋಗ್ಯದ ಅರಿವು ಮೂಡಿಸುವುದೇ ಆಗಿದೆ’ ಎಂದರು.
’ಈ ಸಲವೂ ಫೀಲ್ಡ್ ಮಾರ್ಷಲ್ ಮಣೀಕ್ ಶಾ ಪರೇಡ್ ಗ್ರೌಂಡ್‌ನಿಂದಲೇ ಓಟ ಶುರುವಾಗಲಿದೆ. ದೇಶದ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಓಟಗಾರರು ಕಣಕ್ಕಿಳಿಯುವರು. ಅಲ್ಲದೇ ಮಜಾ ರನ್ ಕೂಡ ಇರಲಿದೆ’ ಎಂದರು.
ಈ ಸಂದರ್ಭದಲ್ಲಿ ಭಾರತ ಹಾಕಿ ತಂಡದ ಆಟಗಾರ ಮನದೀಪ್ ಸಿಂಗ್ ಅವರು ಓಟದ ಪೋಷಾಕು ಬಿಡುಗಡೆ ಮಾಡಿದರು.
‘ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಗೆದ್ದ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ನಾಯಕತ್ವದಲ್ಲಿ ಭಾರತ ತಂಡವು ಆ ಸಾಧನೆ ಮಾಡಿದ್ದು ಹೆಮ್ಮೆಯ ಕ್ಷಣವಾಗಿದೆ. 41 ವರ್ಷಗಳ ನಂತರ ಭಾರತಕ್ಕೆ ಹಾಕಿ ಕ್ರೀಡೆಯಲ್ಲಿ ಒಲಿಂಪಿಕ್ ಪದಕ ಒಲಿದ ಕ್ಷಣ ಅದು. ನಾವೆಲ್ಲ ಬರೀ ಕೇಳಿದ್ದೆವು. ನಮ್ಮ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಹಲವು ಪದಕಗಳು ಬಂದ ಕತೆಗಳನ್ನು ಕೇಳಿದ್ದೆವು. ನೋಡಿರಲಿಲ್ಲ. ಆದರಿಂದ ನಾವೇ ರಚಿಸಿದ ಇತಿಹಾಸದಿಂದಾಗಿ ಅಪಾರ ಖುಷಿಯಾಗಿತ್ತು. ಪ್ಯಾರಿಸ್ ಒಲಿಂಪಿಕ್ ಕೂಟದ ಕಂಚಿನ ಪದಕ ಜಯ ಕೂಡ ವಿಶೇಷವಾಗಿತ್ತು. ಅಲ್ಲಿ ನನ್ನ ಮಗಳು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವು. ಗೆದ್ದ ಪದಕವನ್ನು ಅವಳ ಕೊರಳಿಗೆ ಹಾಕಿ ಸಂಭ್ರಮಿಸಿದ್ದೆ. ನಾವು ಮುಂದಿನ ಪೀಳಿಗೆಯ ಆಟಗಾರರಿಗೆ ಆತ್ಮವಿಶ್ವಾಸದ ಹಾದಿಯನ್ನು ತೋರಿದ್ದೇವೆ ಎಂಬ ಸಂತೃಪ್ತಿ ಇದೆ’ ಎಂದು ಮನದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.