ADVERTISEMENT

ಟಿಡಿಆರ್ ಅಕ್ರಮ: 12 ಜನರ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೋರಿದ ಎಸಿಬಿ

*ಇಲ್ಲದ ಜಾಗಕ್ಕೆ ಟಿಡಿಆರ್ ಪಡೆದರು *₹27.68 ಕೋಟಿಗೆ ಮಾರಾಟ ಮಾಡಿದರು!

ವಿಜಯಕುಮಾರ್ ಎಸ್.ಕೆ.
Published 24 ಆಗಸ್ಟ್ 2020, 20:32 IST
Last Updated 24 ಆಗಸ್ಟ್ 2020, 20:32 IST
ಎಸಿಬಿ ಲೋಗೊ
ಎಸಿಬಿ ಲೋಗೊ   

ಬೆಂಗಳೂರು: ಇಲ್ಲದ ಜಮೀನು, ಕಟ್ಟಡಗಳಿಗೆಅಕ್ರಮವಾಗಿಅಭಿವೃದ್ಧಿ ಹಕ್ಕು (ಟಿಡಿಆರ್‌) ಪತ್ರ ಪಡೆದು ₹27.68 ಕೋಟಿಗೆ ಮಾರಾಟ ಮಾಡಿದ ಟಿಡಿಆರ್‌ ಬ್ರೋಕರ್‌ಗಳು ಸೇರಿ 12 ಮಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರದ ಅನುಮತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋರಿದೆ.

ವಾಲ್‌ ಮಾರ್ಕ್‌ ರಿಯಾಲ್ಟಿ ಹೋಲ್ಡಿಂಗ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರತನ್ ಲಾಥ್, ಬಿ.ಎಸ್. ಸುರೇಂದ್ರನಾಥ್, ಕೆ.ಗೌತಮ್, ಕೆ.ಸುರೇಶ್‌ ಮತ್ತು ಜಮೀನಿನ ಹಳೇಯ ಮಾಲೀಕರಾದ ಮುನಿರಾಜಪ್ಪ ಹಾಗೂ ಅವರ ಕುಟುಂಬದ 7 ಮಂದಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪತ್ರ ಬರೆದಿದ್ದಾರೆ.

ಏನಿದು ಪ್ರಕರಣ: ಮುನಿರಾಜಪ್ಪ ಅವರ ತಂದೆ ರೇವಣ್ಣ ಹೆಸರಿನಲ್ಲಿ ಕೆ.ಆರ್‌.ಪುರ ಹೋಬಳಿ ಕೌದೇನಹಳ್ಳಿ ಸರ್ವೆ ನಂಬರ್ 132ರಲ್ಲಿ ಇದ್ದ ಜಾಗವನ್ನು ಅವರ ಮಕ್ಕಳು 1989ರಲ್ಲಿ 10 ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದರು. ನಿವೇಶನ ಖರೀದಿಸಿದವರು ಅಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡು ಸ್ವಾಧೀನಾನುಭವದಲ್ಲಿ ಇದ್ದಾರೆ.

ADVERTISEMENT

ಈ ಜಾಗವನ್ನು ಟಿ.ಸಿ. ಪಾಳ್ಯ ಮತ್ತು ಹೊರಮಾವು ರಸ್ತೆ ವಿಸ್ತರಣೆಗೆ ಗುರುತಿಸಲಾಯಿತು. ನಿವೇಶನ ಪಡೆದು ಕಟ್ಟಡ ಕಟ್ಟಿದವರು ಆಸ್ತಿಯ ಹಾಲಿ ಮಾಲೀಕರಾಗಿದ್ದರೂ, ಮೂಲ ಮಾಲೀಕರಾದ ಮುನಿರಾಜಪ್ಪ ಅವರನ್ನು ರತನ್‌ ಲಾಥ್ ಮತ್ತು ಇತರ ಮಧ್ಯವರ್ತಿಗಳು ಸಂಪರ್ಕಿಸಿದರು. ಮುನಿರಾಜಪ್ಪ ಮೂಲಕ ಟಿಡಿಆರ್‌ಗೆ ಅರ್ಜಿ ಸಲ್ಲಿಸಿದರು.

‘ಮುನಿರಾಜಪ್ಪ ಅವರ ತಂದೆಯ ಹೆಸರಿನಲ್ಲಿ ಪಹಣಿ ಪಡೆದು ರೇವಣ್ಣ ಅವರ ಮರಣ‍ಪ್ರಮಾಣ ಪತ್ರ ಸಲ್ಲಿಸಿ ಖಾತೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಪೂರ್ವ ತಾಲ್ಲೂಕಿನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ, ಹಾಲಿ ಮಾಲೀಕರು ಬಿಬಿಎಂಪಿಗೆ ಕಂದಾಯ ಪಾವತಿಸುತ್ತಿರುವುದು ತಿಳಿದಿದ್ದರೂ ಬ್ರೋಕರ್‌ಗಳೊಂದಿಗೆ ಶಾಮೀಲಾಗಿ ಖಾತೆ ವರ್ಗಾವಣೆ ಮಾಡಿದ್ದಾರೆ’ ಎಂದು ಎಸಿಬಿ ತನಿಖಾಧಿಕಾರಿ ವಿವರಿಸಿದ್ದಾರೆ.

‘ಖಾತೆ ವರ್ಗಾವಣೆಯಾದ ಬಳಿಕ ಮುನಿರಾಜಪ್ಪ ಮತ್ತು ಕುಟುಂಬದವರಿಂದ ಬ್ರೋಕರ್‌ಗಳು ಜಿಪಿಎ ಮಾಡಿಸಿಕೊಂಡಿದ್ದಾರೆ. ಅವರಿಗೆ ₹2.70 ಕೋಟಿಯನ್ನು ಚೆಕ್‌ಗಳ ಮೂಲಕ ಪಾವತಿಸಿದ್ದಾರೆ. ನಂತರ ಟಿಡಿಆರ್ ಪಡೆಯಲು ಅರ್ಜಿದಾರರ ಪರವಾಗಿ ಎಲ್ಲ ಪ್ರಕ್ರಿಯೆಗಳನ್ನು ಬ್ರೋಕರ್‌ಗಳೇ ಮುಂದುವರಿಸಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ಬಿಬಿಎಂಪಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳೂ ಬ್ರೋಕರ್‌ಗಳ ಜತೆ ಶಾಮೀಲಾದರು. ಜಾಗದ ವಾಸ್ತವ ಮಾಲೀಕತ್ವ ಮರೆಮಾಚಿ, ರಸ್ತೆ ವಿಸ್ತರಣೆಗೆ ಒಳಪಡದ ಹಾಗೂ ಅಸ್ತಿತ್ವದಲ್ಲೇ ಇಲ್ಲದ ಕಟ್ಟಡಗಳ ಹೆಸರು ಸೇರಿಸಿದರು. ಅಲ್ಲದೇ ಒಂದು ಮಹಡಿ ಮನೆ ಇದ್ದರೆ ಮೂರು ಮಹಡಿ ಎಂದು ಸುಳ್ಳು ದಾಖಲೆ ಸೃಷ್ಟಿಸಿದರು.’

‘ಮುನಿರಾಜಪ್ಪ ಅವರಿಗೆ ವಿತರಣೆಯಾದ ಎರಡು ಟಿಡಿಆರ್‌ಗಳನ್ನು 12 ರಿಯಲ್ ಎಸ್ಟೇಟ್ ಕಂಪನಿಗಳಿಗೆ ಬ್ರೋಕರ್‌ಗಳು ಮಾರಾಟ ಮಾಡಿ ₹27.68 ಕೋಟಿ ಲಾಭ ಮಾಡಿಕೊಂಡಿದ್ದಾರೆ. ಅದನ್ನು ನಾಲ್ಕು ಬ್ರೋಕರ್‌ಗಳು ಹಂಚಿಕೊಂಡಿದ್ದಾರೆ’ ಎಂದು ವಿವರಿಸಿದ್ದಾರೆ.

‘ರಸ್ತೆ ವಿಸ್ತರಣೆ ಮಾಡಬೇಕಾದಲ್ಲಿ ಇದೇ ಜಾಗದ ನಿವೇಶನಗಳ ಮಾಲೀಕರಿಗೆ ಮತ್ತೆ ಟಿಡಿಆರ್‌ಗಳನ್ನು ಬಿಬಿಎಂಪಿ ವಿತರಿಸಬೇಕಾಗುತ್ತದೆ. ಸರ್ಕಾರಕ್ಕೆ ವಂಚಿಸಿ ಅಕ್ರಮವಾಗಿ ಟಿಡಿಆರ್ ಪಡೆದ ಬ್ರೋಕರ್‌ಗಳು ಮತ್ತು ಮುನಿರಾಜಪ್ಪ ಕುಟುಂಬದವರ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲಿಗೆ ಅನುಮತಿ ನೀಡಬೇಕು’ ಎಂದು ಎಡಿಜಿ‍ಪಿ ಕೋರಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.