ADVERTISEMENT

ಬಿಎಂಟಿಸಿ ಬಸ್‌ ಡಿಕ್ಕಿ: ಶಿಕ್ಷಕಿ ಸಾವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 21:21 IST
Last Updated 1 ಸೆಪ್ಟೆಂಬರ್ 2022, 21:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊರವರ್ತುಲ ರಸ್ತೆಯ ನಾಗರಬಾವಿ ವೃತ್ತದ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದರಿಂದ ಸರ್ಕಾರಿ ಶಾಲೆಯ ಶಿಕ್ಷಕಿ ಸಂತೋಷಿ (54) ಎಂಬುವರು ಮೃತಪಟ್ಟಿದ್ದಾರೆ.

‘ನಾಗರಬಾವಿ ನಿವಾಸಿ ಸಂತೋಷಿ, ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆ ಶಿಕ್ಷಕಿ. ಶಾಲೆ ಮುಗಿಸಿಕೊಂಡು ಮನೆಗೆ ವಾಪಸು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಹೊಸಕೆರೆಹಳ್ಳಿಯಿಂದ ವಾಹನದಲ್ಲಿ ನಾಗರಬಾವಿ ವೃತ್ತಕ್ಕೆ ಸಂಜೆ 5 ಗಂಟೆ ಸುಮಾರಿಗೆ ಬಂದಿಳಿದಿದ್ದ ಸಂತೋಷಿ, ರಸ್ತೆಯಲ್ಲಿ ನಡೆದುಕೊಂಡು ಮನೆಯತ್ತ ಹೊರಟಿದ್ದರು. ಅದೇ ಮಾರ್ಗದಲ್ಲಿ ಹೊರಟಿದ್ದ ಬಿಎಂಟಿಸಿ ಬಸ್, ಶಿಕ್ಷಕಿಗೆ ಗುದ್ದಿ ಮೈ ಮೇಲೆ ಹರಿದಿತ್ತು. ತೀವ್ರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ. ಚಾಲಕ ತಿಮ್ಮಯ್ಯ ಅವರನ್ನು ಬಂಧಿಸಲಾಗಿದ್ದು, ಬಸ್ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

‘ಬಸ್‌ ಪಾಸ್‌ ಕೇಳಿದ್ದಕ್ಕೆ ದೌರ್ಜನ್ಯ’

ಬೆಂಗಳೂರು: ಹಿರಿಯ ನಾಗರಿಕರ ಬಸ್‌ ಪಾಸ್‌ ಕೇಳಿದ್ದಕ್ಕೆ ಬಿಎಂಟಿಸಿ ಶ್ರೀ ವಿದ್ಯಾನಗರ ಬಸ್ ಡಿಪೊ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿದ್ದಾರೆ ಎಂದು ಪ್ರಯಾಣಿಕ ಸಿ.ಎ. ಕೃಷ್ಣಮೂರ್ತಿ ಅವರು ದೂರಿದ್ದಾರೆ.

ಬಿಎಂಟಿಸಿ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಅವರು ದೂರು ಸಲ್ಲಿಸಿದ್ದಾರೆ.

‘ಪ್ರತಿ ದಿನ ಶ್ರೀವಿದ್ಯಾನಗರದಿಂದ ಸಂಚರಿಸುತ್ತೇನೆ. ತಿಂಗಳ ಮೊದಲ ದಿನ ಗುರುವಾರ ಹಿರಿಯ ನಾಗರಿಕರ ಬಸ್‌ ಪಾಸ್‌ ನೀಡುವಂತೆ ಕೋರಿದಾಗ ಸಿಬ್ಬಂದಿ ಏಕವಚನದಲ್ಲಿ ಮಾತನಾಡಿ, ತಳ್ಳಿದರು. ಪಾಸ್‌ಗಳು ಇನ್ನೂ ಬಂದಿಲ್ಲ. ಬಂದಾಗ ತೆಗೆದುಕೊಂಡು ಹೋಗು ಎಂದು ನಿಂದಿಸಿದರು. ಕೆಲವರು ನಾಲ್ಕೈದು ಕಿಲೋ ಮೀಟರ್‌ ದೂರದಿಂದ ಬಸ್‌ಪಾಸ್‌ಗಾಗಿ ಬಂದಿದ್ದರು. ಅವರು ನಿರಾಶೆಯಿಂದ ತೆರಳಿದರು. ಪ್ರಶ್ನೆ ಮಾಡಿದ್ದಕ್ಕೆ ದೌರ್ಜನ್ಯವೆಸಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ಈ ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲ. ನಿಗದಿಪಡಿಸಿದ ಸಮಯಕ್ಕಿಂತ 15 ನಿಮಿಷ ಮೊದಲೇ ತೆರಳುತ್ತವೆ. ಪ್ರಯಾಣಿಕರ ಸಮಸ್ಯೆಗಳಿಗೆ ಸಿಬ್ಬಂದಿ ಸ್ಪಂದಿಸುವುದೇ ಇಲ್ಲ’ ಎಂದು ದೂರಿದ್ದಾರೆ.

‘ಸಿಬ್ಬಂದಿಯ ವರ್ತನೆಯ ಬಗ್ಗೆ ಘಟಕದ ವ್ಯವಸ್ಥಾಪಕರಾದ ಮಹೇಶ್‌ ಅವರಿಗೆ ದೂರು ಸಲ್ಲಿಸಿದ್ದೇನೆ. ಹಿರಿಯ ನಾಗರಿಕರಿಗೆ ಅಗೌರವ ತೋರಿರುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.