ADVERTISEMENT

ಕೋವಿಡ್‌: 23 ಶಿಕ್ಷಕರಿಗೆ ಪರಿಹಾರ ನೀಡಲು ₹ 6.90 ಕೋಟಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 20:06 IST
Last Updated 6 ಜೂನ್ 2022, 20:06 IST

ಬೆಂಗಳೂರು: ಕೋವಿಡ್‌ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಸರ್ಕಾರಿ ಪ್ರೌಢ ಶಾಲೆಗಳ 23 ಶಿಕ್ಷಕರಿಗೆ ತಲಾ ₹ 30 ಲಕ್ಷದಂತೆ ಪರಿಹಾರ ನೀಡಲು ₹ 6.90 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇಲಾಖೆಯ ಆಯುಕ್ತರು ಪತ್ರ ಬರೆದಿದ್ದಾರೆ.

2021–22 ನೇ ಸಾಲಿನಲ್ಲಿ ಶಾಲಾ ನಿರ್ವಹಣೆಗೆ (ಸಾದಿಲ್ವಾರು ವೆಚ್ಚ) ಅನುದಾನ ನಿಗದಿಗೊಳಿಸಿರಲಿಲ್ಲ. ಹೀಗಾಗಿ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿದ್ಯುತ್‌ ವೆಚ್ಚ, ನೀರಿನ ವೆಚ್ಚ, ಶೌಚಾಲಯ ಸ್ವಚ್ಛತೆಯ ವೆಚ್ಚ, ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರರ ಶವ ಸಂಸ್ಕಾರಕ್ಕೆ ವೆಚ್ಚಕ್ಕೆ ಸಹಾಯಧನ ಹಾಗೂ ಕೋವಿಡ್‌ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟವರಿಗೆ ಪರಿಹಾರ ನೀಡಲು ಜಿಲ್ಲಾ ಕಚೇರಿಗಳಿಂದ ಪಡೆದ ಮಾಹಿತಿಯಂತೆ ₹ 29.25 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಆಗಿರಲಿಲ್ಲ.

'2022– 23ನೇ ಸಾಲಿನಲ್ಲಿ ಈ ವೆಚ್ಚಗಳಿಗೆ ₹ 24.76 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಜಿಲ್ಲೆಗಳಿಂದ ಪಡೆದ ಮಾಹಿತಿಯ ಅನ್ವಯ ಈ ಅನುದಾನದಲ್ಲಿ, ಪ್ರತಿ ಶಾಲೆಗಳಿಗೆ ತಲಾ ₹ 60 ಸಾವಿರದಂತೆ ಸಾದಿಲ್ವಾರು ವೆಚ್ಚಗಳಿಗೆಂದು ಅನುದಾನ ನೀಡಲಾಗಿದೆ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನೌಕರರ ಶವ ಸಂಸ್ಕಾರದ ವೆಚ್ಚದ ಸಹಾಯಧನಕ್ಕೆ ಈ ಮೊತ್ತದಿಂದ ಹಣ ಬಳಸಿಕೊಳ್ಳಲಾಗಿದೆ. ಆದರೆ, ಕೋವಿಡ್‌ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಸರ್ಕಾರಿ ನೌಕರರಿಗೆ ಪರಿಹಾರಧನ ನೀಡಲು ಅನು
ದಾನ ಲಭ್ಯ ಇಲ್ಲದಂತಾಗಿದೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.